LATEST NEWS
ನಾಲ್ಕು ತಿಂಗಳ ಹಿಂದೆ ನಾಪತ್ತೆಯಾದ ಉದ್ಯಮಿ ಹೆಂಡತಿ ಶವ ಜಡ್ಜ್ ಬಂಗಲೆ ಬಳಿ ಪತ್ತೆ..!
ಲಕ್ನೋ: ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಉದ್ಯಮಿ ಪತ್ನಿಯ ಶವ ವಿವಿಐಪಿ ಪ್ರದೇಶದಲ್ಲಿ ಪತ್ತೆಯಾಗಿದ್ದು ತನಿಖೆಯ ಬಳಿಕ ಇದೊಂದು ಕೊಲೆ ಎಂದು ಪೊಲೀಸರು ತೀರ್ಮಾನಿಸಿದ್ದು ಆರೋಪಿ ಜಿಮ್ ಟ್ರೈನರ್ ನನ್ನು ಬಂಧಿಸಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಬಂಗಲೆ ಬಳಿ ಈ ಮಹಿಳೆಯ ಶವ ಪತ್ತೆಯಾಗಿದೆ. ಜೂನ್ 24 ರಂದು ಇಲ್ಲಿನ ಪ್ರಮುಖ ಉದ್ಯಮಿಯೊಬ್ಬರ ಪತ್ನಿ ಏಕ್ತಾ ಗುಪ್ತಾ ನಾಪತ್ತೆಯಾಗಿದ್ದರು. ಇದೀಗ ಪೊಲೀಸರು ಆಕೆಯನ್ನು ಕೊಲೆ ಮಾಡಿ ಹೂತಿಟ್ಟ ಸ್ಥಳವನ್ನು ಪತ್ತೆ ಹಚ್ಚಿಅವರ ಅವಶೇಷಗಳನ್ನು ಆಫೀಸರ್ಸ್ ಕ್ಲಬ್ ಆವರಣದಿಂದ ಹೊರತೆಗೆಯಲಾಗಿದೆ. ಈ ಸಂಬಂಧ ಆರೋಪಿ ಜಿಮ್ ಟ್ರೈನರ್ ವಿಮಲ್ ಸೋನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವಿಮಲ್‌ಗೆ ವಿವಾಹ ನಿಶ್ಚಯವಾಗಿದ್ದ ಬಗ್ಗೆ ಮಹಿಳೆ ಅಸಮಾಧಾನಗೊಂಡಿದ್ದಳು ಎನ್ನಲಾಗಿದೆ. ಕೊಲೆಯಾದ ದಿನ ಆಕೆ, 20 ದಿನಗಳ ನಂತರ ಜಿಮ್‌ಗೆ ಬಂದಿದ್ದಳು. ಆರೋಪಿ ಮತ್ತು ಮಹಿಳೆ ಇಬ್ಬರೂ ಮಾತುಕತೆಗೆ ಕಾರಿನಲ್ಲಿ ಹೊರ ಹೋಗಿದ್ದು ಅಲ್ಲಿ ಪರಸ್ಪರರಿಗೆ ಜಗಳವಾಗಿದೆ. ಈ ವೇಳೆ ಆರೋಪಿಯು ಮಹಿಳೆಯ ಕುತ್ತಿಗೆಗೆ ಗುದ್ದಿದ್ದಾನೆ. ಆ ಪೆಟ್ಟಿನಿಂದ ಆಕೆ ಮೂರ್ಛೆ ಹೋಗಿದ್ದಾಳೆ. ಬಳಿಕ ಆತ ಕೊಲೆ ಮಾಡಿ ಆಫಿಸರ್ಸ್ ಕ್ಲಬ್ ಮತ್ತು DM ನಿವಾಸದ ನಡುವೆ ಹಾದುಹೋಗುವ ಗೋಡೆಯ ಬುಡದಲ್ಲಿ 10 ಅಡಿ ಆಳ ಮತ್ತು ಮೂರು ಅಡಿ ಅಗಲದ ಸಮಾಧಿ ಮಾಡಿ ಆಕೆಯ ಶವವನ್ನು ಹೂತು ಹಾಕಿದ್ದಾನೆ. ‘ದೃಶ್ಯಂ’ ಚಲನಚಿತ್ರದಿಂದ ತನಗೆ ಈ ಐಡಿಯಾ ಹೊಳೆಯಿತು ಎಂದು ಆರೋಪಿ ವಿಮಲ್ ಪೋಲಿಸರಿಗೆ ಬಾಯ್ಬಿಟ್ಟಿದ್ದಾನೆ.