LATEST NEWS
Hireglow Elegant ವಂಚನೆ ಪ್ರಕರಣ – 280ಕ್ಕೂ ಅಧಿಕ ಜನರಿಗೆ ವಂಚಿಸಿದ ಆರೋಪಿಗಳು ಅರೆಸ್ಟ್

ಮಂಗಳೂರು, ಜುಲೈ 6 : ಬೆಂದೂರ್ ವೆಲ್ ನಲ್ಲಿ Hireglow Elegant Overseas International Ltd ಎಂಬ ಕಚೇರಿ ತೆಗೆದು 280ಕ್ಕೂ ಅಧಿಕ ಮಂದಿಗೆ ವಿದೇಶದಲ್ಲಿ ಉದ್ಯೋಗ ತೆಗೆಸಿಕೊಡುವುದಾಗಿ ನಂಬಿಸಿ ವಂಚನೆ ಎಸಗಿದ್ದ ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಪ್ರಮುಖ ಆರೋಪಿಗಳಿಬ್ಬರನ್ನು ಮುಂಬೈನಲ್ಲಿ ಬಲೆಗೆ ಕೆಡವಿದ್ದಾರೆ.
ಬಂಧಿತರನ್ನು ನವಿ ಮುಂಬೈನ ಕೋಪರ್ ಕೈರಾನೆ ನಿವಾಸಿ ದಿಲ್ ಶಾದ್ ಅಬ್ದುಲ್ ಸತ್ತಾರ್ ಖಾನ್ (45) ಮತ್ತು ಥಾಣೆಯ ಡೊಂಬಿವಿಲಿ ನಿವಾಸಿ ಸಾಹುಕಾರಿ ಕಿಶೋರ್ ಕುಮಾರ್ ಅಲಿಯಾಸ್ ಅನಿಲ್ ಪಾಟೀಲ್ (34) ಎಂದು ಗುರುತಿಸಲಾಗಿದೆ.ಆರೋಪಿಗಳು ಮಂಗಳೂರಿನ ಬೆಂದೂರ್ ವೆಲ್ ನಲ್ಲಿ Hireglow Elegant Overseas International Ltd ಎಂಬ ಕಚೇರಿಯನ್ನು ತೆರೆದು ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟು ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಉದ್ಯೋಗದ ಹಿಂದೆ ಬಿದ್ದವರಿಂದ ಲಕ್ಷಾಂತರ ರೂಪಾಯಿ ಹಣವನ್ನು ಪಡೆದು ವಂಚಿಸಿದ್ದರು.

ಒಬ್ಬೊಬ್ಬರು 2ರಿಂದ 5 ಲಕ್ಷದ ವರೆಗೆ ಹಣ ಕೊಟ್ಟಿದ್ದರೂ ಉದ್ಯೋಗ ನೀಡದೇ ಇದ್ದಾಗ ಸಂತ್ರಸ್ತರು ಕದ್ರಿ ಠಾಣೆಯಲ್ಲಿ ದೂರು ನೀಡಿದ್ದರು. ಈ ಬಗ್ಗೆ ಫೆಬ್ರವರಿ ತಿಂಗಳಲ್ಲಿ ಕದ್ರಿ ಠಾಣೆಯಲ್ಲಿ 289 ಜನರಿಗೆ 4.50 ಕೋಟಿ ಹಣ ವಂಚಿಸಿದ್ದಾಗಿ ಪ್ರಕರಣ ದಾಖಲಾಗಿತ್ತು. ಈ ಹಿಂದೆ ಮುಂಬೈ ಮೂಲದ ಮಸಿವುಲ್ಲಾ ಖಾನ್ ಎಂಬಾತನನ್ನು ಬಂಧಿಸಲಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ತನಿಖೆಯನ್ನು ಮುಂದುವರೆಸಿರುವ ಪೊಲೀಸರು ಈಗ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.