ಉಡುಪಿ ಅಕ್ಟೋಬರ್ 28: ಅಜೆಕಾರರುವಿನಲ್ಲಿ ನಡೆದ ಬಾಲಕೃಷ್ಣ ಪೂಜಾರಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ತನಿಖೆ ಮುಂದುವರೆಸಿದ್ದು, ಆರೋಪಿ ಪ್ರತಿಮಾ ಅವರ ಪ್ರಿಯಕರ ದಿಲೀಪ್‌ ಹೆಗ್ಡೆಯಿಂದ ರಾಸಾಯನಿಕ ಬಾಟಲಿ ಎಸೆದಿರುವ ಪ್ರದೇಶಗಳಲ್ಲಿ ಮಹಜರು ನಡೆಸಲಾಗಿದೆ.


ಪ್ರಿಯಕರನ ಜೊತೆ ಸೇರಿ ಪತ್ನಿಯೇ ತನ್ನ ಪತಿಗೆ ವಿಷ ಉಣಿಸಿ, ಬಳಿಕ ಉಸಿರುಗಟ್ಟಿಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯನ್ನು ಇಂದು ಕೂಡ ಮುಂದುವರೆಸಿ, ಮಹಜರು ಪ್ರಕ್ರಿಯೆ ಮುಂದುವರೆಸಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿರುವ ಪ್ರಿಯಕರ ದಿಲೀಪ್ ಹೆಗ್ಡೆ ಯನ್ನು ವಿವಿಧ ಪ್ರದೇಶಗಳಿಗೆ ಕರೆದೊಯ್ದು ಸ್ಥಳ ಮಹಜರು ಮಾಡಿದ್ದಾರೆ. ಪ್ರತಿಮಾಳು ವಿಷವನ್ನು ಪ್ರತೀನಿತ್ಯ ತನ್ನ ಪತಿಗೆ ಆಹಾರದ ಜತೆ ಮಿಶ್ರಣ ಮಾಡಿ ಕೊಟ್ಟ ಬಳಿಕ ಖಾಲಿಯಾದ ವಿಷದ ಬಾಟಲಿಯನ್ನು ಪ್ರಿಯಕರ ದಿಲೀಪ್‌ ಹೆಗ್ಡೆಗೆ ನೀಡಿದ್ದು, ಆತ ಕಾರ್ಕಳ ಕುಕ್ಕುಂದೂರಿನ ಅಯ್ಯಪ್ಪನಗರದ ಕುಕ್ಕುಂದೂರು-ಹಿರ್ಗಾನ ಸಂಪರ್ಕ ರಸ್ತೆಯ ಬಳಿ ಬಾಟಲಿ ಎಸೆದಿರುವುದಾಗಿ ಪೊಲೀಸರಲ್ಲಿ ಬಾಯ್ಬಿಟ್ಟಿದ್ದ. ಆದರೆ ಅ. 27ರಂದು ಪೊಲೀಸರು ಬಾಟಲಿ ಪತ್ತೆಗಾಗಿ ಆರೋಪಿಯನ್ನು ಆ ಸ್ಥಳಕ್ಕೆ ಕರೆದೊಯ್ದು ಹುಡುಕಿದಾಗ ಅಲ್ಲಿ ಯಾವುದೇ ಬಾಟಲಿ ಪತ್ತೆಯಾಗಿಲ್ಲ.


ದಿಲೀಪ್‌ ಹೆಗ್ಡೆಯು ಪ್ರತಿಮಾಳಿಗೆ ರಾಸಾಯನಿಕದ ಬಾಟಲಿಗಳನ್ನು ನೀಡಿದ ಮರ್ಣೆ ಗ್ರಾಮದ ಅಜೆಕಾರು ಪೇಟೆ ಬಳಿಯ “ಪ್ರತಿಮಾಸ್‌ ಬ್ಯೂಟಿ ಲಾಂಜ್‌’ ಸಮೀಪದಲ್ಲಿ ಪೊಲೀಸರ ಮಹಜರು ಕಾರ್ಯ ನಡೆದಿದೆ. ಮೃತರ ಮೂಳೆಗಳಲ್ಲಿ ಆರ್ಸೆನಿಕ್‌ ಟ್ರೈಆಕ್ಸೆ„ಡ್‌ ರಾಸಾಯನಿಕ ಇರುವ ಸಾಧ್ಯತೆ ಬಗ್ಗೆ ಮೃತರ ತಂದೆಯಾದ ಸಂಜೀವ ಸಾಲಿಯಾನ್‌ ಅವರಲ್ಲಿ ವಿಚಾರಿಸಿ, ಅವರ ಒಪ್ಪಿಗೆಯಂತೆ ಮೃತರ ಉತ್ತರಕ್ರಿಯೆ ಬಗ್ಗೆ ತೆಗೆದಿರಿಸಿದ್ದ ಮೂಳೆಗಳ 2 ತುಂಡುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅಜೆಕಾರು ದೆಪ್ಪುತ್ತೆಯ ಬಾಲಕೃಷ್ಣ ಕೊಲೆಗೆ ಸಂಬಂಧಿಸಿದಂತೆ ಕೊಲೆ ಆರೋಪಿ ಪ್ರತಿಮಾ ತನ್ನ ಪತಿ ಬಾಲಕೃಷ್ಣ ಅವರಿಗೆ ಅಹಾರದಲ್ಲಿ ಸೇರಿಸಿದ್ದ ವಿಷ ಪದಾರ್ಥವು ಆರ್ಸೆನಿಕ್‌ ಟ್ರೈ ಆಕ್ಸೈಡ್‌ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

Share Information