KARNATAKA
ಉಡುಪಿ: ಅಮಾಯಕ ತಾಯಿ ಮೂವರು ಮಕ್ಕಳನ್ನು ಕೊಂದ ನರಹಂತಕ ಈ ಪ್ರವೀಣ್ ಚೌಗಲೆ ಯಾರು..?
ಉಡುಪಿ ನವೆಂಬರ್ 15: ಉಡುಪಿಯಲ್ಲಿ ತಾಯಿ ಮೂವರು ಮಕ್ಕಳನ್ನು ನಿರ್ದಯ ಮತ್ತು ಅಮಾನುಷವಾಗಿ ಹತ್ಯೆ ಮಾಡಿದ ನರ ಹಂತಕ ಪ್ರವೀಣ್ ಚೌಗಲೆ ಕೊನೆಗೂ ಬೆಳಗಾವಿಯ ಕುಡಚಿಯಲ್ಲಿ ಬೆಳಗಾವಿ ಮತ್ತು ಉಡುಪಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಿದ್ದಾರೆ. ಉಡುಪಿಗೆ ಬಿಗಿ ಭದ್ರತೆಯಲ್ಲಿ ಕರೆ ತಂದ ಪೊಲೀಸರು ಕೋರ್ಟಿಗೆ ಹಾಜರು ಪಡಿಸಿದ್ದು ನ್ಯಾಯಾಧೀಶರು 14 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದ್ದಾರೆ.
ಯಾರು ಈ ಪ್ರವೀಣ್ ಚೌಗಲೆ.?
ಚೌಗಲೆ ಹಿಂದೆ ಮಹಾರಾಷ್ಟ್ರದಲ್ಲಿ ಪೊಲೀಸ್ ಆಗಿದ್ದ. ಪುಣೆಯಲ್ಲಿ ಈತ ಪೊಲೀಸ್ ಕೆಲಸಕ್ಕೆ ಸೇರಿದ್ದ. ಮೂರೇ ತಿಂಗಳಲ್ಲಿ ರಾಜೀನಾಮೆ ನೀಡಿ ಏರ್ ಇಂಡಿಯಾ ಸೇರಿಕೊಂಡ. ಕಳೆದ 10 ವರ್ಷಗಳಿಂದ ಈತ ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ. ಅವರು ಏರ್‌ಲೈನ್ ಉದ್ಯಮಕ್ಕೆ ಸೇರಿದ್ದರು ಮತ್ತು ಏರ್ ಇಂಡಿಯಾದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಚೌಗಲೆ ಹಿಂದೂವಾಗಿದ್ದರೂ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದ ಆದ್ರೆ ಅವಳಿಗೆ ಹಿಂದೂ ಹೆಸರನ್ನು ಇಟ್ಟಿದ್ದು ಇಬ್ಬರು ಮಕ್ಕಳಿದ್ದಾರೆ. ಮಂಗಳೂರು ಏರ್ ಪೋರ್ಟಿನಲ್ಲಿ ಏರ್ ಇಂಡಿಯಾದ ಸಿಬಂದಿಯಾಗಿ ಕೆಲಸ ಮಾಡುತ್ತಿದ್ದ ಪ್ರವೀಣ್ಗೆ ಹೊಸತಾಗಿ ಸೇರಿಕೊಂಡಿದ್ದ ಯುವತಿ ಆಯ್ನಾಝ್ ಪರಿಚಿತರಾಗಿದ್ದಳು. ಆದ್ರೆ ಈ ಪರಿಚಯವನ್ನು ಬೇರೆಯದ್ದೇ ಅರ್ಥದಲ್ಲಿ ಆರೋಪಿ ಚೌಗಲೆ ಪರಿಗಣಿಸಿದ್ದ ಎನ್ನಲಾಗಿದೆ. ಪ್ರಾಥಮಿಕ ತನಿಖೆಗಳ ಆಧಾರದಲ್ಲಿ ಆರೋಪಿ ಪ್ರವೀಣ್ ಸ್ವಾಮ್ಯ ಸ್ವಾಭಾವದ ವ್ಯಕ್ತಿಯಾಗಿದ್ದ ಎನ್ನಲಾಗಿದೆ.ಆದ್ರೆ ಅದ್ಯಾವುದೋ ಅಸೂಯೆ ಮತ್ತು ದ್ವೇಷ ಈತನಿಗೆ ಕೊಲೆಯನ್ನು ಪ್ರಚೋದಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿ ಚೌಗಲೆ ಉಡುಪಿಯ ಕೊಲೆಯಾದ ಮನೆ ಬಹಳ ಹತ್ತಿರದಿಂದ ಬಲ್ಲವನಾಗಿದ್ದು ಆಟೋ ಚಾಲಕನಿಗೂ ಇವನೇ ಮಾರ್ಗ ಹೇಳಿದ್ದಾನೆ.
ಭಾನುವಾರ ಮುಂಜಾನೆ ಮಂಗಳೂರಿನಿಂದ ಉಡುಪಿಗೆ ಬಂದಿದ್ದ ಆರೋಪಿ ಆಟೋ ಹತ್ತಿಕೊಂಡು ನೇರವಾಗಿ ಆಯ್ನಾಝ್ ಮನೆಗೆ ಬಂದಿದ್ದಾನೆ. ಅಯ್ನಾಝ್ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿರುವಾಗಲೇ ಏಕಾಏಕಿ ಮನೆಗೆ ನುಗ್ಗಿ ಕೊಲೆ ಮಾಡಿದ್ದಾನೆ. ಅಯ್ನಾಜ್ ಆತನ ಟಾರ್ಗೆಟ್ ಆಗಿದ್ದ ಕಾರಣ ಆಕೆಯನ್ನೇ ಆತ ಹುಡುಕಿಕೊಂಡು ಬಂದಿದ್ದಾನೆ. ಮೊದಲು ಆತ ಆಕೆಯನ್ನು ಕೊಂದಿದ್ದಾನೆ ಬಳಿಕ ಅಡ್ಡಬಂದ ಉಳಿದವರನ್ನು ನಿರ್ದಯವಾಗಿ ಮುಗಿಸಿದ್ದಾನೆ. ಕೇವಲ 15 ನಿಮಿಷಗಳಲ್ಲಿ ನಾಲ್ಕು ಕೊಲೆಗಳನ್ನು ಮಾಡಿ ಮುಗಿಸಿದ್ದಾನೆ ಎಂದು ತನಿಖೆ ವೇಳೆ ಪೋಲಿಸರಿಗೆ ಬಾಯ್ಬಿಟ್ಟಿದ್ದಾನೆ.
ಉಡುಪಿಯಲ್ಲಿ ಕೊಲೆ ಮಾಡಿ 15 ನಿಮಿಷದಲ್ಲಿ ಅಲ್ಲಿಂದ ಕರಾವಳಿ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಪೊಲೀಸರಿಗೆ ತನ್ನ ಗುರುತು ಸಿಗದಂತೆ ಶರ್ಟ್ ಹಾಗೂ ತಲೆಯ ಟೋಪಿಯನ್ನು ಬದಲಿಸಿದ್ದಾನೆ. ನಂತರ, ಪೊಲೀಸರ ಕಣ್ತಪ್ಪಿಸಿಕೊಂಡು ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಬೆಳಗಾವಿಗೆ ತೆರಳಿದ್ದ ಅಲ್ಲಿಂದ ದೀಪಾವಳಿ ಆಚರಿಸಲು ತನ್ನ ತವರೂರು ಮಹಾರಾಷ್ಟ್ರದ ಸಾಂಗ್ಲಿಗೆ ಹೋಗಲು ಪ್ಲಾನ್ ಮಾಡಿಕೊಂಡಿದ್ದ. ಹಸೀನಾ (48) ಮತ್ತು ಅವರ ಮಕ್ಕಳಾದ ಮಂಗಳೂರಿನಲ್ಲಿ ಲಾಜಿಸ್ಟಿಕ್ಸ್ ಒಂದರಲ್ಲಿ ಕೆಲಸದಲ್ಲಿರುವ ಅಫ್ನಾನ್ (23), ಏರ್ ಇಂಡಿಯಾದಲ್ಲಿ ಉದ್ಯೋಗಿಯಾಗಿರುವ ಅಯ್ನಾಝ್ (21) ಹಾಗೂ 8ನೇ ತರಗತಿಯ ಅಸೀಮ್(12) ನರ ಹಂತಕ ಪ್ರವೀಣ್ ನ ಕೈಯಲ್ಲಿ ಕೊಲೆಯಾದ ದುರ್ದೈವಿಗಳಾಗಿದ್ದಾರೆ. ಕೊಲೆಯಾದ ಹಸೀನಾ ಅವರ ಅತ್ತೆ ಹಾಜಿರಾ (70) ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. .
ಮನೆಯೊಳಗೆ ಏನಾಗುತ್ತಿದೆ ಧಾವಿಸಿ ಜೀವ ಕಳಕೊಂಡ ಬಾಲಕ :
ಬ್ರಹ್ಮಾವರ ಖಾಸಗಿ ಶಾಲೆಯ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಅಸೀಮ್ ನೆರೆ ಮನೆಯ ಸ್ನೇಹಿತರೊಂದಿಗೆ ಆಟವಾಡಲು ಸೈಕಲ್‌ನಲ್ಲಿ ತೆರಳಿದ್ದ. ಬೆಳಗ್ಗೆ 8.30 ರ ಸುಮಾರಿಗೆ ತಿಂಡಿ ತಿನ್ನುವುದಕ್ಕೆ ಮನೆಗೆ ಮರಳಿದ್ದ ಎನ್ನಲಾಗಿದೆ. ಅಷ್ಟೊತ್ತಿಗಾಗಲೇ ಪ್ರವೀಣ್ ಮನೆಯಲ್ಲಿದ್ದ ಮೂವರನ್ನು ಕೊಲೆಗೈದಿದ್ದ. ಕೂಗಾಟದ ಸದ್ದು ಕೇಳಿದ ಬಾಲಕ ಮನೆಯ ಅಂಗಳದಲ್ಲೇ ಸೈಕಲ್ ಬಿಟ್ಟು ಮನೆಯೊಳಗೆ ಓಡಿದ್ದ. ಇದೇ ವೇಳೆ ಕೃತ್ಯ ಎಸಗಿ ಹೊರಗಡೆ ಬರುತ್ತಿದ್ದ ನರ ಹಂತಕನ ಕಣ್ಣಿಗೆ ಬಾಲಕ ಅಸೀಮ್ ಬಿದ್ದಾಗಿತ್ತು. ಮನೆಯೊಳಗೆ ಓಡಿ ಬರುತ್ತಿದ್ದಾಗ ಹಾಲ್‌ನಲ್ಲೇ ಆತನ ಹೊಟ್ಟೆಗೆ ಚೂರಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅಸೀಮ್ ಸ್ಥಳದಲ್ಲೇ ಅಸುನೀಗಿದ್ದಾನೆ.
ತಾಂತ್ರಿಕ ಸಾಕ್ಷ್ಯ ಮತ್ತು ಗುಪ್ತಚರ ವರದಿ ಆಧಾರಲ್ಲಿ ಪ್ರವೀಣ್ ಖೆಡ್ಡಾ..!
ತಾಂತ್ರಿಕ ಸಾಕ್ಷ್ಯ ಮತ್ತು ಗುಪ್ತಚರ ವರದಿ ಆಧಾರಗಳ ಮೇಲೆ ನರ ಹಂತಕ ಪ್ರವೀನನ್ನು ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ಘಟನೆ ಬೆಳಕಿಗೆ ಬಂದ ಕೂಡಲೇ ಅಲರ್ಟ್ ಆಗಿದ್ದ ಉಡುಪಿ ಪೊಲೀಸರು ತನಿಖೆ ಆರಂಭಿಸುವಾಗಲೇ ಒಂದು ಕಣ್ಣನ್ನು ಮಂಗಳೂರು ಏರ್ ಪೋರ್ಟ್ ನತ್ತ ನೆಟ್ಟಿದ್ದರು. ಅಯ್ನಾಝ್ ಸಹೋದ್ಯೋಗಿಗಳ ಪೈಕಿ ಪ್ರವೀಣ್ ಮೊಬೈಲ್ ಸ್ವಿಚ್ ಆಫ್ ಆಗಿದ್ದುದು ಪೊಲೀಸರ ಗಮನಕ್ಕೆ ಬಂದಿತ್ತು.ಮಂಗಳವಾರ ಮಧ್ಯಾಹ್ನ ಪ್ರವೀಣ್ ಮೊಬೈಲ್ ಆನ್ ಮಾಡುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಪೊಲೀಸರು ಬೆಳಗಾವಿಯ ಕುಡಚಿಯ ಸಂಬಂಧಿಕರ ಮನೆಯಿಂದ ಸ್ಥಳೀಯ ಪೊಲೀಸರ ನೆರವಿನೊಂದಿಗೆ ವಶಕ್ಕೆ ಪಡೆಯಲು ಸಾಧ್ಯವಾಗಿದೆ. ಮೇಲ್ನೋಟಕ್ಕೆ ಹತ್ಯೆಗೆ ಒಂದೇ ಕಾರಣವಲ್ಲ, ಮೂರ್ನಾಲ್ಕು ಕಾರಣಗಳು ಇರುವ ಸಾಧ್ಯತೆಗಳಿದ್ದು ಸಂಪೂರ್ಣ ತನಿಖೆ ಮಾಡದೆ ಯಾವ ಕಾರಣವನ್ನೂ ಹೇಳಲು ಸಾಧ್ಯವಿಲ್ಲ ಎಂದು ಉಡುಪಿ ಎಸ್‌ಪಿ ಹೇಳಿದ್ದಾರೆ.
ಅಯ್ನಾಜ್‌ಳ ಕುಟುಂಬ ಕೊಲೆ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ಕೊಲೆಗೆ ಕಾರಣ ಏನು ಎಂಬೂದು ಪ್ರಮುಖವಾಗಲಿದೆ. ಅಯ್ನಾಝ್ ಮತ್ತು ಪ್ರವೀಣ್ ಚೌಗುಲೆ ನಡುವಿನ ಸಂಬಂಧಗಳ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಆದ್ದರಿಂದ ಮೃತ ಕುಟುಂಬದವರು ಮತ್ತು ಪ್ರವೀಣ್ ಮಧ್ಯೆ ಬೇರೇನಾದರೂ ಸಂಪರ್ಕಗಳಿತ್ತಾ ಎಂಬುದರ ಕುರಿತ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಎಸ್ಪಿ ತಿಳಿಸಿದ್ದಾರೆ.
ಅದೇನೆ ಇದ್ರೂ ಈ ಬರ್ಬರ ಹತ್ಯಾಕಾಂಡವನ್ನು ಜಾತಿ ಧರ್ಮ, ಸಮುದಾಯಗಳ ಎಲ್ಲೆ ಮೀರಿ ಜನ ಖಂಡಿಸಿದ್ದಾರೆ. ನರ ಹಂತಕ ಪ್ರವೀಣ್ ಬಂಧಿಸಿ ಜನ ನಿಟ್ಟುಸಿರು ಬಿಡುವಂತೆ ಮಾಡಿದ ಉಡುಪಿ ಪೊಲೀಸ್ ವರಿಷ್ಟಾಧಿಕಾರಿ ಡಾ. ಅರುಣ್ ಕೆ., ಪೊಲೀಸರ ಕಾರ್ಯವನ್ನು ಮುಸ್ಲೀಂ ಸಂಘಟನೆಗಳು ಸೇರಿದಂತೆ ಎಲ್ಲಾ ಸಮುದಾಯ ಮತ್ತು ಜನತೆ ಮುಕ್ತ ಕಂಠದಿಂದ ಶ್ಲಾಘಿಸಿದೆ.