DAKSHINA KANNADA
ಕಳ್ಳತನದ ಜೊತೆಗೆ ದೇವಸ್ಥಾನದಲ್ಲಿ ವಿಕೃತಿ ಮೆರೆದ ಕಳ್ಳರು…..!!
ಪುತ್ತೂರು ಜನವರಿ 12: ದೇವಸ್ಥಾನಕ್ಕೆ ನುಗ್ಗಿ ಕಳ್ಳತನ ನಡೆಸುವ ಜೊತೆಗೆ ಕ್ಷೇತ್ರವನ್ನು ಅಪವಿತ್ರಗೊಳಿಸಿ ವಿಕೃತಿ ಮೆರೆದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಕೆಮ್ಮಾಯಿ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದಿದೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಬೆಳಿಗ್ಗಿನ ಪೂಜೆಗೆ ದೇವಸ್ಥಾನದ ಬಾಗಿಲು ತೆಗೆದ ಸಂದರ್ಭದಲ್ಲಿ ಕಳ್ಳತನ ನಡೆದ ಬಗ್ಗೆ ಮಾಹಿತಿ ತಿಳಿದುಬಂದಿದೆ.
ದೇವಸ್ಥಾನದ ಪ್ರಾಂಗಣದ ಹೆಂಚು ತೆಗೆದು ಒಳ ನುಗ್ಗಿರುವ ಕಳ್ಳರು ಗರ್ಭಗುಡಿಗೆ ನುಗ್ಗಿ ದೇವರ ವಿಗ್ರಹಕ್ಕೆ ಹಾಕಿದ್ದ ಬೆಳ್ಳಿಯ ಸರ, ಬಂಗಾರದ ಪದಕ ಹಾಗೂ ಬೆಳ್ಳಿಯ ಇತರೆ ಪೂಜಾ ಸಾಮಗ್ರಿಗಳನ್ನು ದೋಚಿ ಪರಾರಿಯಾಗಿದೆ. ಕಳ್ಳತನ ನಡೆಸಿ ಹೋಗುವ ಬದಲು ದೇವಸ್ಥಾನವನ್ನು ಅಪವಿತ್ರಗೊಳಿಸಿ ಈ ತಂಡ ಭಕ್ತರ ಆಕ್ರೋಶಕ್ಕೆ ಎಡೆ ಮಾಡಿದೆ. ದೇವಸ್ಥಾನದ ಗರ್ಭಗುಡಿ ಸೇರಿದಂತೆ ದೇವಸ್ಥಾನದ ಸುತ್ತಲೂ ಉಗುಳಿ ಹೋಗಿ ವಿಕೃತಿ ಮೆರೆದಿದ್ದಾರೆ. ಅಲ್ಲದೆ ದೇವರ ಅಭಿಷೇಕಕ್ಕೆಂದು ತಂದಿರುವ ಸೀಯಾಳಗಳನ್ನು ದೇವಸ್ಥಾನದ ಒಳಗೇ ಕುಡಿದಿರುವುದಲ್ಲದೆ, ಮದ್ಯವನ್ನೂ ಸೇವಿಸಿದೆ.
ಕಳ್ಳತನ ನಡೆಸಲು ಬರುವ ಕಳ್ಳರು ಮುಖ್ಯವಾಗಿ ಕಳ್ಳತನ ಮಾತ್ರ ಮಾಡಿ ತೆರಳಿದರೆ, ಈ ದೇವಸ್ಥಾನವನ್ನು ಅಪವಿತ್ರ ಮಾಡುವ ಉದ್ಧೇಶದಿಂದಲೇ ದೇವಸ್ಥಾನದ ಒಳಗೆ ನುಗ್ಗಿದ್ದಾರೆಯೇ ಎನ್ನುವ ಸಂಶಯ ಮೂಡಿವೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರಾಧನಾ ಕೇಂದ್ರಗಳಲ್ಲಿ ಇಂಥಹ ವಿಕೃತಿ ಮೆರೆಯುವ ಘಟನೆಗಳು ಹೆಚ್ಚಾಗಿ ನಡೆಯುತ್ತಿರುವುದು ಸಮಾಜದ ಶಾಂತಿಭಂಗಕ್ಕೂ ಇಂಥ ಪ್ರಕರಣಗಳು ಕುಮ್ಮಕ್ಕು ನೀಡುತ್ತಿವೆ. ತಿಂಗಳ ಹಿಂದೆ ಮಂಗಳೂರಿನ ಹಲವು ದೇವಸ್ಥಾನಗಳ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಹಾಕಿದ, ದೇವರ ಬಗ್ಗೆ ಅವಹೇಳನಕಾರಿಯಾಗಿ ಬರೆದು ಆ ಕಾಗದಗಳನ್ನು ಕಾಣಿಕೆ ಹುಂಡಿಯಲ್ಲಿ ಹಾಕುವ ಘಟನೆಗಳೂ ನಡೆದಿದೆ.
ಕಳ್ಳತನದ ಜೊತೆಗೆ ಸಮಾಜದ ಶಾಂತಿ ಕದಡುವ ಉದ್ಧೇಶವೂ ಇಂಥಹ ಕೃತ್ಯಗಳ ಹಿಂದೆ ಇರುವುದು ಮೇಲ್ನಾಟಕ್ಕೆ ಕಂಡು ಬರಲಾರಂಭಿಸಿದ್ದು, ಪೋಲೀಸ್ ಇಲಾಖೆ ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸುವ ಅನಿವಾರ್ಯತೆಯಿದೆ. ಪುತ್ತೂರಿನ ಕೆಮ್ಮಾಯಿ ವಿಷ್ಣುಮೂರ್ತಿ ದೇವಸ್ಥಾನದ ಕಳ್ಳತನದ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ದೇವಸ್ಥಾನಕ್ಕೆ ನುಗ್ಗುವ ಮೊದಲು ಕಳ್ಳರ ತಂಡ ದೇವಸ್ಥಾನದ ಪಕ್ಕದಲ್ಲೇ ಇರುವ ಮೂರು ಅಂಗಡಿಗಳಲ್ಲೂ ಕಳ್ಳತನ ನಡೆಸಿದೆ. ಪೋಲೀಸರು ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು, ಭಕ್ತರ ಭಾವನೆಗೆ ಧಕ್ಕೆ ತರುವ ಇಂಥಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಭಕ್ತರು ಪೋಲೀಸರನ್ನು ಒತ್ತಾಯಿಸಿದ್ದಾರೆ.
ದೇವಸ್ಥಾನದ ಹೊರಾಂಗಣದಲ್ಲಿರುವ ಕಂಬದ ಮೂಲಕ ದೇವಸ್ಥಾನದ ಒಳಗೆ ಸೇರಿರುವ ಕಳ್ಳರು, ದೇವಸ್ಥಾನದ ತುಂಬೆಲ್ಲಾ ಹುಡುಕಾಟ ನಡೆಸಿದ್ದಾರೆ. ಅಲ್ಲದೆ ಕಳ್ಳತನ ಆರಂಭಿಸುವ ಮೊದಲು ದೇವಸ್ಥಾನದ ಒಳಗೆ ಯಾರೂ ಬರದಂತೆ ಮುನ್ನೆಚ್ಚರಿಕೆಯಾಗಿ ಹೆಬ್ಬಾಗಿಲಿನ ಮುಂದೆ ಎಣ್ಣೆಯನ್ನು ಚೆಲ್ಲಿದ್ದಾರೆ. ಬೆಳ್ಳಿ ಆಭರಣಗಳ ಜೊತೆಗೆ ದೇವರಿಗೆ ಪ್ರತಿನಿತ್ಯ ಅಭಿಷೇಕ ಮಾಡಲು ಉಪಯೋಗಿಸುವ ಗಂಧದ ಕೊರಡುಗಳನ್ನೂ ಕಳ್ಳರು ದೋಚಿದ್ದಾರೆ.
ಪ್ರತೀವರ್ಷವೂ ಈ ದೇವಸ್ಥಾನಕ್ಕೆ ಕಳ್ಳರು ನುಗ್ಗುವುದು ಸಾಮಾನ್ಯವಾಗಿದೆ. ಈಗಾಗಲೇ ನಾಲ್ಕು ಬಾರಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಕಳ್ಳತನ ನಡೆಸಿದ್ದರೂ, ದೇವಸ್ಥಾನದಲ್ಲಿ ಸಿಸಿ ಕ್ಯಾಮಾರಾ ಅಳವಡಿಸಬೇಕು ಎನ್ನುವ ಒತ್ತಾಯವೂ ಭಕ್ತರಿಂದ ಕೇಳಿ ಬಂದಿದೆ.