Connect with us

LATEST NEWS

ಇವರ ಮಧ್ಯ ಕುಳಿತುಕೊಳ್ಳಲು ಕೊರೋನಾಕ್ಕೂ ಜಾಗ ಇಲ್ಲ….!!

ಬಂಟ್ವಾಳ ಜನವರಿ 12: ಬಂಟ್ವಾಳದಲ್ಲಿ ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಜನ ಸೇವಕ ಕಾರ್ಯಕ್ರಮದಲ್ಲಿ ಕೊರೊನಾ ಮಾರ್ಗದರ್ಶಿಯನ್ನು ಸಂಪೂರ್ಣ ಉಲ್ಲಂಘಿಸಿಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ದಕ್ಷಿಣಕನ್ನಡ ಜಿಲ್ಲಾಡಳಿತ ಸಾಮಾನ್ಯರಿಗೊಂದು ನೀತಿ ಹಾಗೂ ಜನಪ್ರತಿನಿಧಿಗಳೊಂದು ನೀತಿ ಅನುಸರಿಸುತ್ತಿದೆ ಎನ್ನುವುದು ಇಲ್ಲಿ ಸ್ಪಷ್ಟವಾಗಿ ಕಾಣಿಸಿದೆ.


ನಿನ್ನೆ ಬಂಟ್ವಾಳದ ಬಂಟರ ಭವನದಲ್ಲಿ ನಡೆದ ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಜನಸೇವಕ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕಾರ್ಯಕ್ರಮದಲ್ಲಿ ಕೊರೊನಾ ಮಾರ್ಗದರ್ಶಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.

ರಾಜ್ಯ ಸಚಿವರು, ಸಂಸದರು, ಶಾಸಕರು ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಯಾರೂ ಕೂಡ ಮಾಸ್ಕ್ ಧರಿಸಿಲ್ಲ. ಇಲ್ಲಿ ಸಾಮಾಜಿಕ ಅಂತರ ಕೂಡ ಪಾಲನೆಯಾಗಿಲ್ಲ. ಅಲ್ಲದೆ ಕಾರ್ಯಕರ್ತರು ಕೂತ ಸಭಾಂಗಣದಲ್ಲಿ ಕಿಕ್ಕಿರಿದು ಜನ ಸೇರಿದ್ದು, ಅದರಲ್ಲಿ ಕೊರೊನಾಕ್ಕೂ ಕೂತುಕೊಳ್ಳಲು ಜಾಗ ಇಲ್ಲದೆ ಹಾಗೆ ಸೇರಿದ್ದರು.


ಇನ್ನು ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಕೊರೊನಾ ಮಾರ್ಗಸೂಚಿ ಪಾಲಿಸದ ಚರ್ಚ್ ಹಾಲ್ ಗೆ ಮಂಗಳೂರು ಮಹಾನಗರಪಾಲಿಕೆಯ ಅಧಿಕಾರಿಗಳು 5 ಸಾವಿರ ರೂಪಾಯಿ ದಂಡ ವಿಧಿಸಿದ್ದರು. ಮದುವೆ ಸಮಾರಂಭದಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದ ಹಿನ್ನಲೆ ಈ ದಂಡ ವಿಧಿಸಲಾಗಿತ್ತು.


ಆದರೆ ಬಂಟ್ವಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲೂ ಕೊರೊನಾ ಮಾರ್ಗಸೂಚಿ ಪಾಲಿಸಿಲ್ಲ. ಜಿಲ್ಲಾಡಳಿತ ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ಅನುಮತಿ ನೀಡಿದೆ. ಇಲ್ಲಿ 150 ಜನರಿಗಿಂತ ಅಧಿಕ ಜನರು ಸೇರಿದ್ದು, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯವನ್ನು ಯಾರೂ ಪಾಲನೆ ಮಾಡಿಲ್ಲ. ಒಟ್ಟಾರೆ ಕೊರೊನಾ ನಿಯಮಗಳು ಕೇವಲ ಜನ ಸಾಮಾನ್ಯರಿಗೆ ಮಾತ್ರ ಅನ್ವಯ..ಜನಪ್ರತಿನಿಧಿಗಳಿಗೆ ಇಲ್ಲ.