LATEST NEWS
ದೇವಸ್ಥಾನ ಪದ್ದತಿಗಳ ಬದಲಾವಣೆ ಬಗ್ಗೆ ತಂತ್ರಿಗಳು ನಿರ್ಧರಿಸಬೇಕು ಸರಕಾರ ಅಲ್ಲ – ಕೇರಳ ಸಚಿವ
ತಿರುವನಂತಪುರಂ ಜನವರಿ 05: ದೇವಸ್ಥಾನಗಳಲ್ಲಿ ಪುರುಷರು ಶರ್ಟ್ ಧರಿಸದೇ ತೆರಳುವ ಪದ್ದತಿಯನ್ನು ತೆಗೆದು ಹಾಕಬೇಕು ಎಂಬ ಕೇರಳ ಸಿಎಂ ಅಭಿಪ್ರಾಯಕ್ಕೆ ಇದೀಗ ಅವರದೇ ಸರಕಾರದ ಮಂತ್ರಿಯೊಬ್ಬರು ಅಸಮಧಾನ ವ್ಯಕ್ತಪಡಿಸಿದ್ದಾರೆ. ದೇವಸ್ಥಾನಗಳ ಪದ್ದತಿ ಬದಲಾವಣೆ ಬಗ್ಗೆ ತಂತ್ರಿಗಳು ತೀರ್ಮಾನ ಕೈಗೊಳ್ಳಬೇಕು ಹೊರತು ಸರಕಾರ ಅಲ್ಲ ಎಂದು ರಾಜ್ಯದ ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಹೇಳಿದ್ದಾರೆ.
ನಾಯರ್ ಸರ್ವೀಸ್ ಸೊಸೈಟಿಯ (ಎನ್‌ಎಸ್‌ಎಸ್) ನಿರ್ದೇಶಕ ಮಂಡಳಿ ಸದಸ್ಯರೂ ಆಗಿರುವ ಸಚಿವರು, ಸರ್ಕಾರಕ್ಕೆ ಕೆಲವು ಬದಲಾವಣೆಗಳು ಅಗತ್ಯವೆಂದು ಭಾವಿಸಿದರೆ, ತಂತ್ರಿಗಳೊಂದಿಗೆ ಸಮಾಲೋಚಿಸಿ ಅಥವಾ ‘ದೇವಪ್ರಶ್ನೆ’ ನಡೆಸಿದ ನಂತರ ಮಾಡಬೇಕು ಎಂದು ಹೇಳಿದರು. “ವಿವಿಧ ದೇವಾಲಯಗಳು ತಮ್ಮ ಪದ್ಧತಿಗಳು ಮತ್ತು ಆಚರಣೆಗಳನ್ನು ಹೊಂದಿವೆ, ಮತ್ತು ಭಕ್ತರು ಅವುಗಳನ್ನು ಪಾಲಿಸಬೇಕು. ಇತರರು ದೇವಸ್ಥಾನಕ್ಕೆ ಹೋಗಬೇಕಾಗಿಲ್ಲ” ಎಂದರು
ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಅವರು ಆರಾಧನಾ ಸ್ಥಳಗಳಲ್ಲಿ ಆಚಾರ-ವಿಚಾರಗಳನ್ನು ಬದಲಾಯಿಸಬೇಕೇ ಬೇಡವೇ ಎಂಬುದನ್ನು ಚರ್ಚಿಸಿ ನಿರ್ಧಾರ ಕೈಗೊಳ್ಳಲಿ , ಪ್ರಸ್ತುತ ಕೇರಳದ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ಇಂತಹ ವಿಚಾರಗಳ ಬಗ್ಗೆ ಚರ್ಚಿಸಲು ಇದು ಸೂಕ್ತ ಸಮಯವಲ್ಲ ಎಂದು ಹೇಳಿದರು. ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ಕೆ.ಮುರಳೀಧರನ್ ಕೂಡ ದೇವಸ್ಥಾನದ ಪದ್ಧತಿಗಳನ್ನು ತಂತ್ರಿಗಳೇ ನಿರ್ಧರಿಸಬೇಕು ಎಂದು ಹೇಳಿದ್ದಾರೆ. ಅನಾದಿ ಕಾಲದ ಸಂಪ್ರದಾಯಗಳನ್ನು ಬದಲಾಯಿಸಲು ರಾಜಕೀಯ ಹಸ್ತಕ್ಷೇಪ ಅಗತ್ಯವಿಲ್ಲ, ದೇವಸ್ಥಾನಗಳ ಸಮಸ್ಯೆಯನ್ನು ಬಿಡಿ,” ಎಂದು ಸುದ್ದಿಗಾರರಿಗೆ ತಿಳಿಸಿದರು.