KARNATAKA
ಭೀಮಾ ನದಿಯಲ್ಲಿ ಈಜಲು ತೆರಳಿ ನೀರು ಪಾಲಾದ ನಾಲ್ವರು ಹುಡುಗರು
ಯಾದಗಿರಿ ಸೆಪ್ಟೆಂಬರ್ 7: ಯಾದಗಿರಿ ಭೀಮಾ ನದಿಯಲ್ಲಿ ಈಜಲು ಹೋಗಿ ನಾಲ್ವರು ಯುವಕರು ನೀರು ಪಾಲಾದ ಘಟನೆ ಯಾದಗಿರಿ ನಗರದ ಗುರುಸಣಗಿ ಬ್ರಿಡ್ಜ್ ಬಳಿ ನಡೆದಿದೆ. ಯಾದಗಿರಿಯ ಅಮಾನ್ (16), ರೆಹಮಾನ್ (16), ಆಯಾನ್ (16) ಹಾಗೂ ಕಲಬುರಗಿ ಮೂಲದ ರೆಹಮಾನ್ (15) ನಾಲ್ವರು ಯುವಕರು ನದಿಗೆ ಈಜಲು ಹೋಗಿ ನೀರುಪಾಲಾಗಿದ್ದರು. ಇಂದು ಬೆಳಿಗ್ಗೆ ನಾಲ್ವರ ಮೃತದೇಹ ಪತ್ತೆಯಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ, ಎನ್ ಡಿಆರ್ ಎಫ್ ತಂಡ, ರಾಷ್ಟ್ರೀಯ ಗೃಹ ರಕ್ಷಕ ದಳ, ಸ್ಥಳೀಯ ಮೀನುಗಾರರಾದ ತಾಯಪ್ಪ ತಾಂಡೂರಕರ, ಅಂಬರೇಶ್ ತಾಂಡೂರಕರ, ಮಲ್ಲಪ್ಪ ಜಾಲಗಾರ, ಮಲ್ಲಪ್ಪ ಕೋಟಿಮನಿ, ಕೃಷ್ಣಪ್ಪ, ಶುಭಾಷ ಜಾಲಗಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.
ಭಾನುವಾರ ಕತ್ತಲಾಗುವರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಮತ್ತೆ ಸೋಮವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಲಾಗಿ ಯುವಕರ ಮೃತದೇಹಗಳು ಪತ್ತೆಯಾಗಿವೆ. ‘ಜಿಲ್ಲಾಧಿಕಾರಿ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ಗುರುಸುಣಗಿ ಬ್ರಿಡ್ಜ್ ಬಳಿ ಎಚ್ಚರಿಕೆ ಸಂದೇಶದ ನಾಮಫಲಕ ಅಳವಡಿಸಲಾಗುವುದು. ಸುತ್ತಮತ್ತಲು ತಂತಿ ಬೇಲಿ ಅಳವಡಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ ತಿಳಿಸಿದ್ದಾರೆ