BANTWAL
ಕಪಿಗಳ ವಿರುದ್ದ ‘ಸರ್ಜಿಕಲ್ ಸ್ಟ್ರೈಕ್’ ಸಮರ ಸಾರಿದ ಸರಪಾಡಿ ಗ್ರಾಮಸ್ಥರು

ಕಪಿಗಳ ವಿರುದ್ದ ‘ಸರ್ಜಿಕಲ್ ಸ್ಟ್ರೈಕ್ ‘ ಸಮರ ಸಾರಿದ ಸರಪಾಡಿ ಗ್ರಾಮಸ್ಥರು
ಬಂಟ್ವಾಳ, ಜನವರಿ 16: ತೆಂಗಿನಕಾಯಿ ಬೆಲೆ ಗಗನಕ್ಕೇರುತ್ತಿರಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನ ಗ್ರಾಮವಾದ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ತೆಂಗು ಕೃಷಿಕರ ಪಾಲಿಗೆ ಕೋತಿಗಳ ಕಾಟ ಬದುಕನ್ನೇ ಹೈರಾಣಾಗಿಸಿದೆ.
ಇದರಿಂದ ಮುಕ್ತಿ ಹೊಂದಲು ಊರಿನ ಕೃಷಿಕರೆಲ್ಲ ಸೇರಿ ಕೋತಿಗಳ ಮೇಲೆ “ಸರ್ಜಿಕಲ್ ಸ್ಟ್ರೈಕ್’ಗೆ ಮುಂದಾಗಿದ್ದಾರೆ. ಕಾಟ ಕೊಡುತ್ತಿರುವ ಮಂಗಗಳನ್ನು ಹಿಡಿದು ಕಾಡಿಗೆ ಅಟ್ಟುವುದಕ್ಕೆ ಕೃಷಿಕರು ಅರಸೀಕೆರೆಯ ರಂಗಸ್ವಾಮಿ ಎಂಬವರನ್ನು ಕರೆಸಿಕೊಂಡಿದ್ದಾರೆ.

ರಂಗಸ್ವಾಮಿಗೆ ಕಳೆದ 25 ವರ್ಷಗಳಿಂದ ಕೃಷಿಗೆ ಹಾನಿ ಮಾಡುತ್ತಿರುವ ಕೋತಿಗಳನ್ನು ಹಿಡಿದು ಕಾಡಿಗೆ ಬಿಡುವುದೇ ಕಾಯಕ.
ಅವರು ತನ್ನ ತಂದೆಯಿಂದ ಈ ವಿದ್ಯೆ ಬಳುವಳಿಯಾಗಿ ಬಂದಿದೆ. ಒಂದು ಊರಿನಲ್ಲಿ ತೋಟಕ್ಕೆ ಲಗ್ಗೆ ಹಾಕುವ ಕೋತಿಗಳನ್ನು ಹಿಡಿದು ದೂರದ ಕಾಡಿಗೆ ಅಟ್ಟುವುದಕ್ಕೆ 25 ಸಾವರದಿಂದ 35 ಸಾವಿರ ವರೆಗೆ ಚಾರ್ಜ್ ಮಾಡುತ್ತಾರೆ.
ಸರಪಾಡಿ ಗ್ರಾಮದ ಕೃಷಿಕರು 35 ಸಾವಿರ ರೂ. ಸಂಭಾವನೆಗೆ ರಂಗ ಸ್ವಾಮಿಯವರನ್ನು ಕರೆಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ರೋಗಬಾಧೆಯಿಂದ ತೆಂಗಿನಕಾಯಿ ಉತ್ಪಾದನೆ ಪಾತಾಳ ಹಿಡಿದರೆ ಬೆಲೆ ಮಾತ್ರ ಗಗನಕ್ಕೇರಿದೆ ಹೀಗಿರುವಾಗ ರಂಗಸ್ವಾಮಿಗೆ 35 ಸಾವಿರ ನೀಡಿದರೂ ನಷ್ಟವಾಗದು ಎಂಬ ಲೆಕ್ಕಾಚಾರ ಗ್ರಾಮಸ್ಥರದ್ದು.
ಹೀಗಾಗಿ ರಂಗಸ್ವಾಮಿ ಮತ್ತು ತಂಡ ಸರಪಾಡಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಸರಪಾಡಿ ಗ್ರಾಮದಲ್ಲಿರುವ ಎಲ್ಲ ಕೋತಿಗಳನ್ನು ಸೆರೆಹಿಡಿದು ಕಾಡಿಗೆ ಅಟ್ಟುವ ತನಕ ಇಲ್ಲೇ ಠಿಕಾಣಿ.
ಅರಂಭದಲ್ಲಿ ಗ್ರಾಮ ಸುತ್ತಾಡಿ ಕೋತಿಗಳ ಚಲನವಲನದ ಬಗ್ಗೆ, ಅವುಗಳು ಉಳಿದುಕೊಳ್ಳುವ ಬಗ್ಗೆ ಅಧ್ಯಾಯನ ನಡೆಸುತ್ತಾರೆ.
ಕೋತಿಗಳು ಹೆಚ್ಚಾಗಿ ಓಡಾಡುವ ತೋಟದೊಳಗೆ ಅಡಿಕೆ ಮರದ ಸಲಿಕೆಗಳಿಂದ ವಿಶೇಷವಾದ ಗೂಡು ನಿರ್ಮಿಸುತ್ತಾರೆ.
ಈ ಗೂಡಿಗೆ ಹತ್ತಿರದಲ್ಲೇ ತೆಂಗಿನ ಗರಿಗಳ ಮತ್ತೂಂದು ಗೂಡನ್ನು ನಿರ್ಮಿಸಿ ಅದರೊಳಗೆ ಕೋತಿಗಳ ಆಗಮನವನ್ನು ಕಾಯುತ್ತಿರುತ್ತಾರೆ.
ಮಂಗಗಳನ್ನು ಸೆರೆಹಿಡಿಯುವ ಗೂಡಿಗೂ ರಂಗಸ್ವಾಮಿ ತಂಡ ಅವಿತಿರುವ ಗೂಡಿಗೂ ಹಗ್ಗದ ಸಂಪರ್ಕ ಇದ್ದು, ಕೋತಿಗಳು ಗೂಡಿನೊಳಗೆ ಪ್ರವೇಶಿಸಿದ ತತ್‌ಕ್ಷಣ ಹಗ್ಗದ ಮೂಲಕ ಅದರ ಬಾಗಿಲು ಮುಚ್ಚಿ ಸೆರೆ ಹಿಡಿಯುತ್ತಾರೆ.
ಕೋತಿಗಳು ಮೊದಲ ಬಾರಿಗೆ ಗೂಡು ಪ್ರವೇಶಿಸಿದಾಗಲೇ ಸೆರೆಹಿಡಿಯುವುದಿಲ್ಲ.
ಕೆಲ ದಿನ ಇದೇ ರೀತಿ ಗೂಡಿನೊಳಗೆ ಬಂದು ಆಹಾರ ತಿಂದು ರೂಢಿಯಾಗುತ್ತಿದ್ದಂತೆ ಗುಂಪಾಗಿ ಗೂಡಿನೊಳಗೆ ಪ್ರವೇಶಿಸಿದಾಗ ಎಲ್ಲ ಕೋತಿಗಳನ್ನು ಸೆರೆ ಹಿಡಿಯಲಾಗುತ್ತದೆ.
ಸೆರೆ ಸಿಕ್ಕ ಕೋತಿಗಳನ್ನು ಗೂಡಿನ ಒಳಗೆ ಇನ್ನೊಂದು ಕೋಣೆ ರಚಿಸಿ ಅಲ್ಲಿ ಕೂಡಿ ಹಾಕಲಾಗುತ್ತದೆ.
ಹೀಗೇ ಕೂಡಿ ಹಾಕಿದ ಕಪಿಗಳು ಗಲಾಟೆ ಮಾಡದಂತೆ ಆಹಾರ ನೀಡಿ ಸುಮ್ಮನಿರಿಸಲಾಗುತ್ತದೆ.
ಸರೆ ಹಿಡಿದ ಕೋತಿಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ಅವುಗಳನ್ನು ದೂರದ ಕಾಡಿಗೆ ಒಯ್ದು ಬಿಡಲಾಗುತ್ತದೆ.
ದಶಕದ ಹಿಂದೆ ಮಂಗಳೂರು ನಗರದ ಕದ್ರಿ ಕೈ ಬಟ್ಟಲ್ ಪ್ರದೇಶದಲ್ಲಿ ಕೋತಿಗಳ ಕಾಟ ವಿಪರೀತವಾಗಿದ್ದ ಸಂದರ್ಭದಲ್ಲಿ ಆಗಿನ ಮೇಯರ್ ದಿವಾಕರ್ ಅವರು ಇದೇ ತಂಡವನ್ನು ಕರೆಸಿ ಇದೇ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಿ 28 ಕೋತಿಗಳನ್ನು ಮರಿಗಳ ಸಮೇತ ಹಿಡಿದು ದೂರದ ಕಾಡಿಗೆ ಬಿಡಲಾಗಿತ್ತು.