LATEST NEWS
ಸುರೇಶ್ ರೈನಾ ಸೋದರ ಮಾವನ ಬರ್ಬರ ಹತ್ಯೆ

ನವದೆಹಲಿ: ನನ್ನ ಸೋದರ ಮಾವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಐಪಿಎಲ್-2020 ಆಡಲು ಯುಎಇಗೆ ಹೋಗದಿದ್ದ ರೈನಾ ಅವರು ವೈಯಕ್ತಿಕ ಕಾರಣದಿಂದ ವಾಪಸ್ ಬಂದಿದ್ದರು. ಇದಾದ ಬಳಿಕ ಅವರು ಐಪಿಎಲ್‍ನಿಂದ ಹೊರಗೆ ಬಂದಿರುವ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಇಷ್ಟಾದರೂ ರೈನಾ ಅವರು ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ. ಈಗ ಮೊದಲ ಬಾರಿಗೆ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ರೈನಾ, ಪಂಜಾಬ್‍ನಲ್ಲಿ ನನ್ನ ಕುಟುಂಬದವರಿಗೆ ಆಗಿರುವುದು ಭಯಾನಕತೆಯನ್ನು ಮೀರಿದೆ. ನನ್ನ ಸೋದರಮಾವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನನ್ನ ಸೋದರತ್ತೆ ಮತ್ತು ನನ್ನ ಸೋದರತ್ತೆ ಮಕ್ಕಳ ಮೇಲೂ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ದುರದೃಷ್ಟವಶಾತ್ ನನ್ನ ಸೋದರತ್ತೆ ಮಗನೋರ್ವ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಸಾವನ್ನಪ್ಪಿದ್ದಾರೆ. ನನ್ನ ಸೋದರತ್ತೆ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾರೆ ಎಂದಿದ್ದಾರೆ.
ಜೊತೆಗೆ ಇದೂವರೆಗೂ ಅಂದು ರಾತ್ರಿ ಏನಾಯಿತು ಮತ್ತು ಯಾರೂ ಮಾಡಿದರು ಎಂಬುದು ಏನೂ ಗೊತ್ತಿಲ್ಲ. ನಾನು ಪಂಜಾಬ್ ಪೊಲೀಸರಿಗೆ ಮನವಿ ಮಾಡುತ್ತೇನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ. ನಾವು ಕೊನೆ ಪಕ್ಷ ಈ ಘೋರ ಕೃತ್ಯವನ್ನು ಯಾರು ಮಾಡಿದ್ದಾರೆ ಎಂದು ತಿಳಿದುಕೊಳ್ಳಲು ಬಯಸುತ್ತೇವೆ. ಆ ಅಪರಾಧಿಗಳು ಇನ್ನೊಂದು ಕೃತ್ಯ ಮಾಡಲು ನಾವು ಬಿಡಬಾರದು ಎಂದು ರೈನಾ ಟ್ವೀಟ್ ಮೂಲಕ ಕೇಳಿಕೊಂಡಿದ್ದಾರೆ.
ರಾಷ್ಟ್ರೀಯ ಮಾಧ್ಯಮದ ವರದಿಯ ಪ್ರಕಾರ, ಪಂಜಾಬ್‍ನ ಪಠಾಣ್‍ಕೋಟ್‍ನ ತರಿಯಾಲ್ ಗ್ರಾಮದಲ್ಲಿ ವಾಸವಿರುವ ರೈನಾ ಅವರ ಸೋದರತ್ತೆ ಕುಟುಂಬ ತಮ್ಮ ಮನೆಯ ಮಹಡಿ ಮೇಲೆ ಮಲಗಿತ್ತು. ಈ ವೇಳೆ ಅವರ ಮೇಲೆ ಅಪರಿಚಿತ ದಾಳಿಕೋರರು ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಪರಿಣಾಮ ಅವರ ಸೋದರ ಮಾವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಮನೆಯ ಎಲ್ಲ ಸದಸ್ಯರು ಕೂಡ ಗಂಭೀರವಾಗಿ ಗಾಯಗೊಂಡಿದ್ದರು.
ರೈನಾ ಅವರ ತಂದೆಯ ಸಹೋದರಿ ಆಶಾ ದೇವಿಯವರ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮತ್ತೊಂದೆಡೆ ಅವರ ಚಿಕ್ಕಪ್ಪ, 58 ವರ್ಷದ ಅಶೋಕ್ ಕುಮಾರ್ ಅವರು ದಾಳಿಯಲ್ಲಿ ಮೃತಪಟ್ಟಿದ್ದಾರೆ. ರೈನಾರ ಅತ್ತೆ ಮತ್ತು ಅತ್ತೆಯ ಮಕ್ಕಳಾದ 32 ವರ್ಷದ ಕೌಶಲ್ ಕುಮಾರ್ ಮತ್ತು 24 ವರ್ಷದ ಅಪಿನ್ ಕುಮಾರ್ ಕೂಡ ದಾಳಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ.