LATEST NEWS
ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ…ಸದ್ಯ 30 ದಿನಗಳ ವರೆಗೆ ಶಿಕ್ಷೆ ಅಮಾನತು…!!
ಸೂರತ್ ಮಾರ್ಚ್ 23: ಚುನಾವಣಾ ರಾಲಿಯೊಂದರಲ್ಲಿ ಎಲ್ಲಾ ಕಳ್ಳರಿಗೂ ಮೋದಿ ಉಪನಾಮವಿದೆʼ ಎಂಬ ಹೇಳಿಕೆಗೆ ಸಂಬಂಧಿಸಿದಂತೆ 2019ರಲ್ಲಿ ಹೂಡಲಾಗಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಪ್ಪಿತಸ್ಥ ಎಂದು ಸೂರತ್ ನ್ಯಾಯಾಲಯ ತೀರ್ಪು ನೀಡಿದ್ದು, 2 ವರ್ಷ ಶಿಕ್ಷೆಯನ್ನು ವಿಧಿಸಿದೆ.
2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕರ್ನಾಟಕದ ಕೋಲಾರದ ರ‍್ಯಾಲಿಯಲ್ಲಿ ‘ಕಳ್ಳರೆಲ್ಲರಿಗೂ ಸಾಮಾನ್ಯವಾಗಿ ಮೋದಿ ಎಂಬ ಉಪನಾಮವೇ ಏಕಿರುತ್ತದೆ’ ಎಂದು ರಾಹುಲ್ ವ್ಯಂಗ್ಯವಾಡಿದ್ದರು. ಈ ಸಂಬಂಧ ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ನೀಡಿದ ದೂರಿನ ವಿಚಾರಣೆಯನ್ನು ಗುರುವಾರ ಕೈಗೆತ್ತಿಕೊಂಡ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ತೀರ್ಪು ನೀಡಿದೆ.
ನಾಲ್ಕು ವರ್ಷಗಳ ಹಿಂದಿನ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಎರಡೂ ಕಡೆಯವರ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಎಚ್‌ಎಚ್ ವರ್ಮಾ, ರಾಹುಲ್ ಗಾಂಧಿಗೆ 2 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಬಳಿಕ ಜಾಮೀನು ಮಂಜೂರು ಮಾಡಿ, 30 ದಿನಗಳ ಕಾಲ ಶಿಕ್ಷೆಯನ್ನು ಅಮಾನತುಗೊಳಿಸಿ ಆದೇಶ ನೀಡಿದರು. ಈ ತೀರ್ಪಿನ ಪರಿಣಾಮದಿಂದಾಗಿ ರಾಹುಲ್ ಗಾಂಧಿ ತಮ್ಮ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳ್ಳುವ ಸಾಧ್ಯತೆ ಇದೆ.
ಜನಪ್ರತಿನಿಧಿಗಳ ಕಾಯ್ದೆಯ ಪ್ರಕಾರ, ಯಾವುದೇ ಜನಪ್ರತಿನಿಧಿಯನ್ನು ಯಾವುದೇ ಪ್ರಕರಣದಲ್ಲಿ ದೋಷಿ ಎಂದು ಕೋರ್ಟ್ ತೀರ್ಪು ಪ್ರಕಟಿಸಿ, 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದರೆ, ಅಂತಹ ಜನಪ್ರತಿನಿಧಿಯನ್ನು ಸದನದಿಂದ ಅನರ್ಹಗೊಳಿಸಲಾಗುತ್ತದೆ ಹಾಗೂ ಚುನಾಯಿತ ಅವಧಿ ಮುಕ್ತಾಯಗೊಂಡ ಬಳಿಕ 6 ವರ್ಷಗಳ ಕಾಲ ಅನರ್ಹತೆ ಎದುರಿಸಬೇಕಾಗುತ್ತದೆ.