KARNATAKA
ಗೋರಿಪಾಳ್ಯ ಅದೊಂದು ಮಿನಿ ಪಾಕಿಸ್ತಾನ ಎಂದ ಹೈಕೋರ್ಟ್ ನ್ಯಾಯಮೂರ್ತಿ ವಿ ಶ್ರೀಶಾನಂದ ವಿರುದ್ದ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ವಿಚಾರಣೆ
ಬೆಂಗಳೂರು ಸೆಪ್ಟೆಂಬರ್ 20: ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ಪ್ರಕರಣವೊಂದರ ವಿಚಾರಣೆ ವೇಳೆ ಮುಸ್ಲಿಂ ಬಾಹುಳ್ಯ ಪ್ರದೇಶವಾದ ಗೋರಿಪಾಳ್ಯದ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹೆದರುತ್ತಿದ್ದಾರೆ. ಅದೊಂದು ಮಿನಿ ಪಾಕಿಸ್ತಾನವಾಗಿ ಮಾರ್ಪಟ್ಟಿದೆ…” ಎಂದು ಅಭಿಪ್ರಾಯಪಟ್ಟಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ವಿಚಾರಣೆ ವೇಳೆ ಮುಕ್ತ ನ್ಯಾಯಾಲಯದಲ್ಲಿ ವ್ಯಕ್ತಪಡಿಸಿರುವ ಮಾತುಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡಿದೆ.
ಕಳೆದ ಆಗಸ್ಟ್ 28ರಂದು ಬಾಡಿಗೆ ನಿಯಂತ್ರಣ ಕಾಯಿದೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ ಮುಕ್ತ ನ್ಯಾಯಾಲಯದಲ್ಲಿ ವ್ಯಕ್ತಪಡಿಸಿರುವ ಮಾತುಗಳು ಸಾಮಾಜಿಕ ಮಾಧ್ಯಮ ಮಾತ್ರವಲ್ಲದೆ, ವಕೀಲ ವೃಂದದಲ್ಲಿಯೂ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಬೆಂಗಳೂರಿನ ಮೈಸೂರು ರಸ್ತೆಯ ಮೇಲ್ಸೇತುವೆಗೆ ಹೋಗಿ ನೋಡಿ. ಅಲ್ಲಿ ಸಂಚರಿಸುವ ಪ್ರತಿಯೊಂದು ಆಟೊ ರಿಕ್ಷಾದಲ್ಲೂ 10 ಜನರನ್ನು ತುಂಬಿಕೊಂಡಿರಲಾಗುತ್ತದೆ. ಮೈಸೂರು ರಸ್ತೆಯ ಮೇಲ್ಸೆತುವೆ ಸಾಗುವ ಗೋರಿಪಾಳ್ಯದಿಂದ ಮಾರುಕಟ್ಟೆಯವರೆಗಿನ ಪ್ರದೇಶ ಭಾರತದಲ್ಲಿ ಇಲ್ಲ. ಅದು ಪಾಕಿಸ್ತಾನದಲ್ಲಿದೆ. ಇದು ವಾಸ್ತವ.. ಇದು ವಾಸ್ತವ.. ಎಂತಹುದೇ ಕಟ್ಟುನಿಟ್ಟಿನ ದಕ್ಷ ಪೊಲೀಸ್ ಅಧಿಕಾರಿಯನ್ನು ಅಲ್ಲಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡಿದರೂ ಅವರನ್ನು ಹಿಡಿದುಬಿಡಲಿ ನೋಡುತ್ತೇನೆ… ” ಎಂದಿದ್ದರು. ಆಟೋದಲ್ಲಿ ಇಂತಿಷ್ಟು ಜನ ಸಾಗಬೇಕು ಎನ್ನುವ ಕಾನೂನು ಅಲ್ಲಿ ಅನ್ವಯವಾಗುವುದಿಲ್ಲ ಎನ್ನುವುದನ್ನು ಶ್ರೀಶಾನಂದ ಹೇಳುತ್ತಿದ್ದರು.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಸೂರ್ಯಕಾಂತ್ ಹಾಗೂ ಹೃಷಿಕೇಶ್ ರಾಯ್ ನೇತೃತ್ವದ ಪೀಠ ವಿವಾದದ ಸಂಬಂಧ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಂದ ವರದಿ ಕೇಳಿದೆ.
“ನ್ಯಾಯಾಂಗ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ನೀಡಿದ ಕೆಲ ಹೇಳಿಕೆಗಳ ಬಗ್ಗೆ ನಮ್ಮ ಗಮನ ಸೆಳೆಯಲಾಗಿದೆ. ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡಲು ನಾವು ಎಜಿ ಮತ್ತು ಎಸ್‌ಜಿ ಅವರನ್ನು ಕೇಳಿಕೊಳ್ಳುತ್ತಿದ್ದೇವೆ. ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ತಿಳಿಸುತ್ತಿದ್ದೇವೆ. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಂದ ಆಡಳಿತಾತ್ಮಕ ನಿರ್ದೇಶನಗಳನ್ನು ಪಡೆದು 2 ವಾರಗಳಲ್ಲಿ ಈ ಪ್ರಕ್ರಿಯೆ ಕೈಗೊಳ್ಳಬಹುದು, ” ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಇಂತಹ ಘಟನೆಗಳು ಮರುಕಳಿಸದಿರುವ ನಿಟ್ಟಿನಲ್ಲಿ ತಾನು ಕೆಲ ಮೂಲಭೂತ ಮಾರ್ಗಸೂಚಿಗಳನ್ನು ರೂಪಿಸುವ ಸಾಧ್ಯತೆಗಳಿವೆ ಎಂದು ಅದು ಹೇಳಿದೆ.