LATEST NEWS
ಸುಳ್ಯ: ಕೊರಗಜ್ಜನ ಪವಾಡಕ್ಕೆ ಊರವರು ಅಚ್ಚರಿ…!?

ಸುಳ್ಯ, ಮಾರ್ಚ್ 26: ತುಳುನಾಡಿನಲ್ಲಿ ಅಲ್ಲಲ್ಲಿ ಆಗಾಗ ಕೊರಗಜ್ಜ ದೈವದ ಪವಾಡಗಳು ನಡೆಯುತ್ತಿರುತ್ತವೆ. ತುಳುನಾಡಿನಲ್ಲಿ ಕೊರಗಜ್ಜನ ಪವಾಡ ಮತ್ತೆ ಮತ್ತೆ ಸಾಬೀತಾಗುತ್ತಿರುವುದರಿಂದ ಈ ದೈವದ ಮೇಲಿನ ನಂಬುಗೆ ಮತ್ತಷ್ಟು ದೃಢವಾಗುತ್ತಾ ಬಂದಿದೆ.
ಕರಾವಳಿಯ ಜನರು ಅಪಾರವಾಗಿ ನಂಬುವ ದೈವ ಶಿವಾಂಶ ಸಂಭೂತ ಕೊರಗಜ್ಜ, ಕರಾವಳಿಗರ ಇಷ್ಟ ದೈವ. ಏನೇ ಕಷ್ಟ ಬರಲಿ, ಮನೆಯ ಸ್ವತ್ತು ಕಳ್ಳತನವಾಗಲಿ, ಮಕ್ಕಳಿಗೆ ಕಾಯಿಲೆ ಬಾಧಿಸಲಿ ಕೊರಗಜ್ಜನಿಗೊಂದು ವೀಳ್ಯದೆಲೆಯ ಹರಕೆ ಹೊತ್ತರೆ ಸಾಕು, ಕ್ಷಣಮಾತ್ರದಲ್ಲಿ ಸಮಸ್ಯೆ ಬಗೆಹರಿಯುತ್ತೆ ಅನ್ನೋದು ನಂಬಿಕೆ ಭಕ್ತರಲ್ಲಿದೆ.

ಕಳೆದ ಶನಿವಾರ ರಾತ್ರಿ ಇಲ್ಲಿನ ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಆದಿಬ್ರಹ್ಮ ಮೊಗೇರ್ಕಳ 40ನೇ ವರ್ಷದ ನೇಮೋತ್ಸವ ಮತ್ತು ಮಂತ್ರಮೂರ್ತಿ ಗುಳಿಗ ದೈವದ ಕೋಲ ನಡೆಯಿತು. ಭಾನುವಾರ ಬೆಳಗ್ಗೆ ಕೊರಗಜ್ಜನ ನೇಮೋತ್ಸವವೂ ನಡೆಯಿತು. ಇದರಲ್ಲಿ 11 ಹರಕೆ ಕೋಲ ಹಾಗೂ ಒಂದು ಕಾಲಾವಧಿ ಕೋಲ ಇತ್ತು. ಹಾಗೇನೆ 12 ಅಗೇಲಿಗೂ ತಯಾರಿ ಮಾಡಿ 12 ದೈವದ ತಲೆಗೆ ಇಡುವ ಮಡಪ್ಪಾಳೆಯನ್ನು ಹಾಗೂ ಇತರ ವಸ್ತುಗಳನ್ನು ಜೋಡಣೆಯೂ ಮಾಡಲಾಗಿತ್ತು ಎನ್ನಲಾಗಿದೆ.
ಹೀಗೆ 12 ಜನ ದೈವ ಪಾತ್ರಿಗಳು ದೈವ ವೇಷ ಕಟ್ಟಿ, ನೇಮೋತ್ಸವ ಹೊರಟು ದೈವಗಳ ನರ್ತನ ಪ್ರಾರಂಭವಾಯಿತು. ಸ್ವಲ್ಪ ಹೊತ್ತಲ್ಲಿ 12 ಕೊರಗಜ್ಜ ದೈವಗಳ ಬದಲು ಕೆಲವರಿಗೆ 13 ದೈವಗಳು ಕಾಣಿಸಿವೆ ಎನ್ನಲಾಗಿದೆ. ಈ ದೈವದ ತಲೆಗೆ ಮಡಪ್ಪಾಳೆ(ಗೋಂಪಾರು) ಇರಲಿಲ್ಲ. ಮಡಪ್ಪಾಳೆಯನ್ನು ದೈವ ಕೇಳಿತು ಎನ್ನಲಾಗಿದ್ದು, ಮತ್ತೆ ಮಡಪ್ಪಾಳೆ ತಯಾರಿ ಮಾಡಿ ದೈವಕ್ಕೆ ಕೊಡಲಾಯಿತು. ಹೀಗೆ ಮಡಪ್ಪಾಳೆ ತಯಾರಿ ಮಾಡಿ ಕೊಟ್ಟ ನಂತರ ಆ ಕೊರಗಜ್ಜ ದೈವ ಕುಣಿದಿದೆ ಎಂಬ ಸುದ್ದಿ ಹರಡಿದೆ.
ಕೊನೆಗೆ ಅಗೇಲು ಬಳಸುವ ಸಂದರ್ಭದಲ್ಲೂ 13 ದೈವಗಳ ಬದಲು 12 ದೈವಗಳು ಮಾತ್ರ ಉಳಿದು ಆ ದೈವ ಕಾಣದಂತೆ ಮಾಯವಾಗಿದೆ ಎನ್ನಲಾಗಿದೆ. ಸಂದರ್ಭದಲ್ಲಿ ಭಕ್ತರು ಮತ್ತು ಸ್ಥಳೀಯ ಸಮಿತಿಯವರ ಮಧ್ಯೆ ದೈವಗಳ ಸಂಖ್ಯೆಗಳ ಬಗ್ಗೆ ಚರ್ಚೆಯಾಗಿದೆ. ಕೆಲವರಿಗೆ 12 ದೈವಗಳು ಮಾತ್ರ ಕಾಣಿಸಿಕೊಂಡಿವೆ ಎನ್ನಲಾಗಿದೆ. ಇನ್ನೂ ಕೆಲವರಿಗೆ 13 ದೈವಗಳು ಕಾಣಿಸಿಕೊಂಡಿವೆ. ಇದು ಭಕ್ತರ ಕುತೂಹಲಕ್ಕೂ ಕಾರಣವಾಗಿದೆ.