DAKSHINA KANNADA
ಸುಳ್ಯ ನ್ಯಾಯಾಲಯದ ಪ್ರಥಮ ದರ್ಜೆ ನ್ಯಾಯಾಧೀಶರ ಮುಂದೆ ಡಿಕೆಶಿ ಹಾಜರ್
ಪುತ್ತೂರು ಅಕ್ಟೋಬರ್ 05: ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ಹೇಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಸುಳ್ಯ ಕೋರ್ಟ್ ವಾರೆಂಟ್ ಜಾರಿ ಮಾಡಿದ ಹಿನ್ನಲೆ ಇಂದು ಸುಳ್ಯ ನ್ಯಾಯಾಲಯದ ಪ್ರಥಮ ದರ್ಜೆ ನ್ಯಾಯಾಧೀಶರ ಎದುರು ಡಿಕೆಶಿ ಹಾಜರಾಗಿ ಸಾಕ್ಷಿ ನುಡಿದಿದ್ದಾರೆ.
ನ್ಯಾಯಾಧೀಶರಾದ ಸೋಮೇಶೇಖರ್ ಅವರ ಎದುರು ಹಾಜರಾದ ಡಿಕೆಶಿ 2016ರ ಫೆಬ್ರವರಿ 27, 28ರಂದು ಐದಾರು ಬಾರಿ ಆರೋಪಿ ಗಿರಿಧರ್ ರೈ ನನಗೆ ಕರೆ ಮಾಡಿದ್ದಾನೆ. ತನ್ನ ಊರಿನಲ್ಲಿ ವಿದ್ಯುತ್ ಸಮಸ್ಯೆ ಇದೆ, ಪರಿಹರಿಸಿ ಅಂತ ಕೆಟ್ಟದಾಗಿ ಮಾತನಾಡಿದ್ದಾನೆ. ಕರೆ ಮಾಡಿದ ಎರಡೂ ದಿನವೂ ನನ್ನ ಜೊತೆ ಅವಾಚ್ಯ ಶಬ್ದ ಬಳಸಿ ಮಾತನಾಡಿದ್ದಾನೆ. ಸೂ…ಮಗ….ಬೋ..ಮಗ ಎಂದು ನನ್ನ ವಿರುದ್ದ ಪದ ಪ್ರಯೋಗಿಸಿದ್ದಾನೆ. ಐದಾರು ಬಾರಿ ಕರೆ ಮಾಡಿದ್ದು, ಅದರಲ್ಲಿ ನಾನು ಎರಡು ಬಾರಿ ಕರೆ ಸ್ವೀಕರಿಸಿ ಮಾತನಾಡಿದ್ದೇನೆ. ಸಮಸ್ಯೆ ಅಧಿಕಾರಿಗಳಿಗೆ ಹೇಳಿ ಪರಿಹರಿಸೋದಾಗಿ ತಾಳ್ಮೆಯಿಂದ ಹೇಳಿದೆ, ಆದರೂ ಆತ ಅತ್ಯಂತ ಕೆಟ್ಟ ಭಾಷೆಯಲ್ಲಿ ನನಗೆ ಬೈದು ಕೊಲೆ ಬೆದರಿಕೆ ಹಾಕಿದ್ದಾನೆ. ಆ ಬಳಿಕ ನಾನು ಸಚಿವನಾಗಿದ್ದ ಕಾರಣ ಅಧಿಕಾರಿಗಳ ಮೂಲಕ ದೂರು ಕೊಡಿಸಿದೆ ಎಂದು ನ್ಯಾಯಾಧೀಶರ ಎದುರು ಡಿ.ಕೆ.ಶಿವಕುಮಾರ್ ಸಾಕ್ಷ್ಯ ನುಡಿದಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ ಕಾನೂನಿಗೆ ತಲೆ ಬಾಗಿ ಕೋರ್ಟ್ ಗೆ ಹಾಜರಾಗಿದ್ದೇನೆ. ಆ ವ್ಯಕ್ತಿ ನನಗೆ ಮಾತ್ರವಲ್ಲದೇ ಅಧಿಕಾರಿಗಳಿಗೂ ಅವಾಚ್ಯ ಶಬ್ದದಿಂದ ಬೈದಿದ್ದಾರೆ. ಸಾರ್ವಜನಿಕ ಕೆಲಸ ಮಾಡೋವಾಗ ಕರ್ತವ್ಯಕ್ಕೆ ಅಡ್ಡಿ ಪ್ರಯತ್ನ ನಡೆಯುತ್ತದೆ. ಈ ಕಾರಣಕ್ಕಾಗಿ ಅಧಿಕಾರಿಗಳು ದೂರು ನೀಡಿದ್ದರು, ಪ್ರಕರಣಕ್ಕೆ ಸಂಬಂಧಿಸಿದ ವಿಚಾರವನ್ನು ಕೋರ್ಟ್ ಮುಂದೆ ಹೇಳಿದ್ದೇನೆ. ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಇದೆ
ನಾನು ಸಚಿವನಾಗಿದ್ದ ಸಂದರ್ಭ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಿದ್ದೇನೆ. ಈಗಿನ ನೂತನ ಸಚಿವರು ಸಮಸ್ಯೆ ಬಗೆಹರಿಸಬಹುದು ಎಂಬ ಭರವಸೆ ಇದೆ ಎಂದರು.