LATEST NEWS
ಹಿಂದುತ್ವದ ಹಿಂದೆ ಹೋಗಿ ಅನಾಹುತ ಆದಾಗ ಯಾರೂ ಇರುವುದಿಲ್ಲ – ಸುಹಾಸ್ ಶೆಟ್ಟಿ ಅವರ ತಂದೆ ಮೋಹನ ಶೆಟ್ಟಿ ಕಣ್ಣೀರು

ಮಂಗಳೂರು ಮೇ 03:ಬಜ್ಪೆ ಕಿನ್ನಿಪದುವಿನಲ್ಲಿ ನಡೆದ ಹಿಂದೂ ಸಂಘಟನೆ ಕಾರ್ಯಕರ್ತರ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ದಕ್ಷಿಣಕನ್ನಡ ಜಿಲ್ಲೆಯನ್ನು ಬೆಚ್ಚಿಬಳಿಸಿದೆ. ಕ್ಯಾನ್ಸರ್ ಪೀಡಿತ ತಾಯಿ, ವಯಸ್ಸಾದ ತಂದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು. ಕಣ್ಣೆದುರೇ ಬೆಳೆದ ಮಗನ ಪಾರ್ಥಿವ ಶರೀರವು ಮೈಮೇಲೆ ಗಂಧದ ಮಾಲೆಗಳನ್ನು ಹೊದ್ದುಕೊಂಡು ಮನೆಯಂಗಳಕ್ಕೆ ಬಂದಾಗ ಈ ಹಿರಿಯ ಜೀವಗಳಿಗೆ ಹಿಡಿದಿಟ್ಟುಕೊಂಡ ನೋವನ್ನು ತಡೆಯಲಾಗಲಿಲ್ಲ. ಮನದಲ್ಲಿ ಮಡುಗಟ್ಟಿದ ದುಃಖ ಕಣ್ಣೀರ ಧಾರೆಯಾಗಿ ಹರಿಯಿತು.
ಮಗನ ಬದುಕಿನಲ್ಲಿ ಹಿಂದುತ್ವವಾದಿ ಚಟುವಟಿಕೆಯ ಜೊತೆಗೆ ಅಪರಾಧಿ ಚಟುವಟಿಕೆ ಬೆಸದುಕೊಂಡಿದ್ದು ತಂದೆ ತಾಯಿಗೆ ಅರಿವಿರಲಿಲ್ಲ ಎಂದಲ್ಲ. ತಮ್ಮ ಮಗನೂ ಎಲ್ಲರಂತೆ ನಿರಾಳವಾಗಿ ಬದುಕಬೇಕು ಎಂಬ ಹಂಬಲ ಹೊತ್ತ ತಂದೆತಾಯಿಯ ಕನಸನ್ನು ಈ ಘಟನೆ ನುಚ್ಚುನೂರು ಮಾಡಿದೆ. ಸುಹಾಸ್ ಶೆಟ್ಟಿ ಅವರ ತಂದೆ ಮೋಹನ್ ಶೆಟ್ಟಿ ‘ಹಿಂದೂ ಹಿಂದೂ ಎಂದು ಯುವಕರು ಹಿಂದುತ್ವದ ಹಿಂದೆ ಹೋಗುತ್ತಾರೆ. ನಾಳೆ ಇಂತಹ ಅನಾಹುತ ಆದಾಗ ಯಾರೂ ಇರುವುದಿಲ್ಲ. ಕೆಲವು ಹಿಂದುತ್ವ ಸಂಘಟನೆಗಳ ಮುಖಂಡರು ನಾವಿದ್ದೇವೆ ಎಂದು ಈಗ ನಾಲೈದು ದಿನ ಬಂದು ಹೋಗುತ್ತಾರೆ. ಅದು ಮಾಡುತ್ತೇವೆ ಇದು ಮಾಡುತ್ತೇವೆ ಎನ್ನುತ್ತಾರೆ. ಎಲ್ಲ ಆದ ಮೇಲೆ ಅವರೂ ಇರುವುದಿಲ್ಲ. ಯಾರೂ ಇರುವುದಿಲ್ಲ’ ಎಂದು ಸುಹಾಸ್ ಶೆಟ್ಟಿ ಅವರ ತಂದೆ ಮೋಹನ ಶೆಟ್ಟಿ ಮಾಧ್ಯಮಗಳ ಮುಂದೆ ನೋವು ತೋಡಿಕೊಂಡರು.

ನಮ್ಮ ಮಗನಿಗೆ 31 ವರ್ಷ. ನಮ್ಮ ಕುಟುಂಬಕ್ಕೆ ಅವನೇ ಆಧಾರ ಸ್ತಂಭವಾಗಿದ್ದ. ಜೀವನ ಪೂರ್ತಿ ಕೊರಗುವವರು ನಾವು’ ಎಂದು ಹೇಳಿದರು. ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು ನಿಜ. ಈಗ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದೆ. ಹಾಗಾಗಿ ನ್ಯಾಯ ಸಿಗುವ ವಿಶ್ವಾಸ ಇಲ್ಲ. ಹಿಂದೂಗಳಿಗೆ ಭದ್ರತೆ ಇಲ್ಲ’ ಎಂದೂ ಅವರು ಹೇಳಿದರು.