LATEST NEWS
ಸಾಮಾನ್ಯ ಮಹಿಳೆಯಂತೆ ದೇವಸ್ಥಾನದಲ್ಲಿ ʻಪೊಂಗಲ್ʼ ತಯಾರಿಸಿದ ʻಸುಧಾ ಮೂರ್ತಿʼ!
ತಿರುವನಂತಪುರಂ, ಮಾರ್ಚ್ 10: ತಿರುವನಂತಪುರಂನ ಅಟ್ಟುಕಲ್ ಭಗವತಿ ದೇವಸ್ಥಾನದ ಪ್ರಸಿದ್ಧ ಪೊಂಗಲ್ ಹಬ್ಬಕ್ಕೆ ಸಾವಿರಾರು ಮಹಿಳೆಯರು ಭಾಗಿಯಾಗಿದ್ದರು. ಈ ವೇಳೆ ವಿಷೇಶ ವ್ಯಕ್ತಿಯೊಬ್ಬರು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಅವರು ಬೇರೆ ಯಾರೂ ಅಲ್ಲ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ.ಖ್ಯಾತ ಶಿಕ್ಷಣತಜ್ಞೆ, ಲೇಖಕಿ, ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಮತ್ತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಸಾವಿರಾರು ಮಹಿಳೆಯರ ನಡುವೆ ಕುಳಿತು ದೇವರಿಗೆ ಪೊಂಗಲ್ (ಅಕ್ಕಿ, ತೆಂಗಿನಕಾಯಿ ಮತ್ತು ಬೆಲ್ಲ ಬಳಸಿ ಮಾಡಿದ ಸಿಹಿ ಖಾದ್ಯ) ಅರ್ಪಿಸಿದರು.
ಐಟಿ ದೈತ್ಯ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಅತ್ತೆಯಾಗಿದ್ದಾರೆ. ದೇವಸ್ಥಾನದಲ್ಲಿ ಅವರ ಬಳಿ ಯಾವುದೇ ವಿಐಪಿ ಸೆಕ್ಯೂರಿಟಿ ಇಲ್ಲದ ಕಾರಣ ಮಹಿಳೆಯರ ಗುಂಪಿನಲ್ಲಿ ಅವರನ್ನು ಗುರುತಿಸಲು ಕಷ್ಟಸಾಧ್ಯವಾಗಿದೆ.
ಸುಧಾ ಮೂರ್ತಿ ಅವರು ದೇವಸ್ಥಾನದ ಬಳಿ ಬರಿ ನೆಲದ ಮೇಲೆ ಕುಳಿತು ಸುಡುವ ಬಿಸಿಲಿನಲ್ಲಿ ನೈವೇದ್ಯವನ್ನು ಸಿದ್ಧಪಡಿಸುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಪೊಂಗಲ್ ಮಾಡುತ್ತಿದ್ದ ಸುಧಾ ಮೂರ್ತಿಯ ಬಳಿ ಕುಳಿತ ಒಬ್ಬ ಸಾಮಾನ್ಯ ಮಹಿಳೆ ʻನಿಮ್ಮ ಪತಿ ಏನು ಮಾಡುತ್ತಾರೆ ಎಂದು ಕೇಳುತ್ತಾಳೆ. ಅದಕ್ಕೆ ಉತ್ತರಿಸಿದ ಸುಧಾ ಮೂರ್ತಿ ಅವರು, ನನ್ನ ಪತಿ ಸಂಸ್ಥೆಯನ್ನು ನಡೆಸುತ್ತಿದ್ದಾರೆ ಎಂದು ಉತ್ತರಿಸುತ್ತಾರೆ.
ಮಹಿಳೆ ತನ್ನ ಕುಟುಂಬದ ಬಗ್ಗೆ ಹೆಚ್ಚಿನ ವಿಚಾರಣೆಗಳನ್ನು ಮಾಡುತ್ತಾಳೆ ಮತ್ತು ತನ್ನ ಅಳಿಯ ಯುಕೆಯಲ್ಲಿ ಏನು ಮಾಡುತ್ತಿದ್ದಾನೆ ಎಂದು ಕೇಳುತ್ತಾಳೆ. ‘ಅವರು ರಾಜಕೀಯದಲ್ಲಿದ್ದಾರೆ’ ಎಂದು ಸುಧಾ ಮೂರ್ತಿ ಉತ್ತರಿಸಿದ್ದಾರೆ. ಆಗ ಮಹಿಳೆ ತನ್ನ ಅಳಿಯ ಕೂಡ ರಾಜಕೀಯದಲ್ಲಿದ್ದಾರೆ ಮತ್ತು ಈಗ ಪಂಚಾಯತ್ ಸದಸ್ಯರಾಗಿದ್ದಾರೆ ಎಂದು ಉತ್ತರಿಸುತ್ತಾರೆ!.
ಸುಧಾ ಮೂರ್ತಿಯನ್ನು ಗುರುತಿಸಿದ ಕೆಲವರಲ್ಲಿ ಜನಪ್ರಿಯ ಮಲಯಾಳಂ ನಟಿ ಚಿಪ್ಪಿ ರೆಂಜಿತ್ ಕೂಡ ಸೇರಿದ್ದಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ಮೂರ್ತಿ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ‘ಜೀವನದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅದ್ಭುತ ವ್ಯಕ್ತಿಯನ್ನು ನಾವು ಪ್ರತಿದಿನ ಭೇಟಿಯಾಗುತ್ತೇವೆ’ ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.