ಬೆಳ್ತಂಗಡಿ ಜುಲೈ 31: ಧರ್ಮಸ್ಥಳದಲ್ಲಿ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಬೆಳವಣಿಗೆ ನಡೆದಿದ್ದು, ಇಂದು ಎಸ್ಐಟಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 6 ನೇ ಪಾಯಿಂಟ್ ನಲ್ಲಿ ಕೆಲವು ಮಾನವ ದೇಹದ ಮೂಳೆಗಳು ಪತ್ತೆಯಾಗಿವೆ.

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧಿಸಿದಂತೆ ಕೊನೆಗೂ ದೂರುದಾರ ಗುರುತಿಸಿದ್ದ 6ನೇ ಪಾಯಿಂಟ್‌ನಲ್ಲಿ ಮಾನವ ದೇಹದ ಮೂಳೆಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ.
ದೂರುದಾರ ಗುರುತಿಸಿದ ಸ್ಥಳಗಳ ಪೈಕಿ ಇದೀಗ 6ನೇ ಪಾಯಿಂಟ್‌ನಲ್ಲಿ 15 ಕಾರ್ಮಿಕರಿಂದ ಉತ್ಖನನ ನಡೆಯುತ್ತಿದ್ದು, ಕೆಲವು ಮೂಳೆಗಳು ಸಿಕ್ಕಿದೆ ಎಂದು ವರದಿಯಾಗಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಎಫ್ಎಸ್ಎಲ್ ತಂಡ ಮೂಳೆಗಳನ್ನು ಸಂರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ ಎಂದು ತಿಳಿದು ಬಂದಿದೆ. ‘ಮೃತದೇಹದ ಕುರುಹು ಸಿಕ್ಕಿದೆ.ಅದು ಗಂಡಸಿನ ಮೃತದೇಹದ ಅವಶೇಷದಂತಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ವಿಧಿವಿಜ್ಞಾನ ತಜ್ಞರ ತಂಡವು ಸ್ಥಳದಲ್ಲೇ ಇದ್ದು, ಮೃತದೇಹದ ಅವಶೇಷಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹ ಪತ್ತೆಗಾಗಿ ಜಾಗ ಅಗೆಯುವ ಕಾರ್ಯವು ಸತತ ಮೂರನೇ ದಿನವಾದ ಗುರುವಾರ ಬೆಳಿಗ್ಗೆ ಮುಂದುವರಿದಿತ್ತು. ಎಸ್‌ಐಟಿ ತಂಡದ ಜೊತೆ ಸುಮಾರು 20 ಕಾರ್ಮಿಕರು ನೇತ್ರಾವತಿ ನದಿ ಪಕ್ಕದ ಕಾಡಿನ ಒಳಗೆ ತೆರಳಿ, ಅಗೆಯುವ ಕಾರ್ಯದಲ್ಲಿ ತೊಡಗಿದ್ದರು.



