Connect with us

    UDUPI

    ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣಕ್ಕೆ ಕ್ರಮ- ಎಸ್ಪಿ

    ಉಡುಪಿ, ಆಗಸ್ಟ್ 26 :ಜಿಲ್ಲೆಯ ವಿವಿದೆಡೆಗಳಲ್ಲಿ ನಡೆಯುತ್ತಿದೆ ಎನ್ನಲಾದ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದ್ದು, 2 ತಿಂಗಳ ಅವಧಿಯಲ್ಲಿ ಸಂಪೂರ್ಣವಾಗಿ ನಿಯಂತ್ರಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಎಂ ಪಾಟೀಲ್ ತಿಳಿಸಿದ್ದಾರೆ.

    ಕಾರ್ಕಳ ಶಾಲಾ ಕಾಲೇಜುಗಳ ಗಾಂಜಾ ಪೂರೈಕೆ

    ಅವರು ಗುರುವಾರ ಜಿಲ್ಲಾ ಪಂಚಾಯತ್‍ನಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.  ಕಾರ್ಕಳದ ಹಲವು ಶಾಲಾ ಕಾಲೇಜುಗಳ ಸಮೀಪದ ಗೂಡಂಗಡಿಗಳಲ್ಲಿ ಗಾಂಜಾ ಪೂರೈಕೆ ನಡೆಯುತ್ತಿದು, ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ ಎಂದು ಸದಸ್ಯ ಸುಮಿತ್ ಶೆಟ್ಟಿ ಹೇಳಿದರು, ಅಂತಹ ಸ್ಥಳಗಳ ಕುರಿತು ನಿರ್ದಿಷ್ಟ ಮಾಹಿತಿ ನೀಡಿ, ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಎಸ್ಪಿ ಈಗಾಗಲೇ ಜಿಲ್ಲೆಯ ಜನತೆಯೊಂದಿಗೆ ಫೋನ್ ಇನ್ ಕಾರ್ಯಕ್ರಮ ನಡೆಸಲಾಗಿದೆ, ಅಲ್ಲಿ ಸಹ ಈ ಕುರಿತು ದೂರುಗಳು ಬಂದಿವೆ, ಮಾಹಿತಿ ನೀಡುವವರು ಅಕ್ರಮ ಚಟುವಟಿಕೆ ನಡೆಯುವ ನಿರ್ದಿಷ್ಟ ಸ್ಥಳಗಳ ಬಗ್ಗೆ ಮಾಹಿತಿ ನೀಡಿದಲ್ಲಿ ಸಂಬಂದಪಟ್ಟವರ ವಿರುದ್ದ ಶೀಘ್ರ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದರು.

    ಹೆಲ್ಮೆಟ್ ಇಲ್ಲದೇ ವಾಹನ ಚಲಾವಣೆ

    ಜಿಲ್ಲೆಯಲ್ಲಿ ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸುವವರ ವಿರುದ್ದ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುವುದು ಹಾಗೂ ಹೆಲ್ಮೆಟ್ ಧರಿಸುವ ಕುರಿತು ಅರಿವು ಮೂಡಿಸಲಾಗುವುದು, ಬೈಂದೂರು ಸೇರಿದಂತೆ, ಅಗತ್ಯವಿರುವ ಪೊಲೀಸ್ ಠಾಣೆಗಳಿಗೆ ಹೊಸ ವಾಹನಗಳನ್ನು  ಚಾಲಕರನ್ನು ನೀಡಿ, ಗಸ್ತು ವ್ಯವಸ್ಥೆಯನ್ನು ಬಲ ಪಡಿಸಲಾಗುವುದು, ಹೆಬ್ರಿ ಠಾಣೆ ಸೇರಿದಂತೆ ಎಲ್ಲಾ ಠಾಣೆಗಳಲ್ಲಿ  ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಸಿಸಿಟಿವಿ ಗಳನ್ನು ಅಳವಡಿಸಲಾಗುವುದು ಹಾಗೂ ಸಂಶಯಾಸ್ಪದ ವ್ಯಕ್ತಿಗಳ ತೀವ್ರ ತಪಾಸಣೆ ನಡೆಯಲಿದೆ ಎಂದು ಎಸ್ಪಿ ತಿಳಿಸಿದರು.

    ಜಿಲ್ಲೆಯಲ್ಲಿ ಚತುಷ್ಪತ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ಹಲವು ಸಮಸ್ಯೆಗಳು ಉಂಟಾಗಿದ್ದು, ಈ ಕುರಿತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಸೆಪ್ಟಂಬರ್ ಮಾಹೆಯಲ್ಲಿ ಪ್ರತ್ಯೇಕ  ಸಭೆ ನಡೆಸಿ, ಅಗತ್ಯ ಬಿದ್ದಲ್ಲಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ಅಧ್ಯಕ್ಷ ದಿನಕರ ಬಾಬು ಹೇಳಿದರು.

    ಜಿಲ್ಲೆಯ ಕೆಲವು ಶಾಲೆಗಳಲ್ಲಿ ಕಳಪೆ ಗುಣಮಟ್ಟದ ಸೈಕಲ್ ಗಳನ್ನು ವಿತರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಈ ಕುರಿತಂತೆ ಶಿಕ್ಷಣ ಇಲಾಖೆಗೆ ನಿರ್ಣಯ ಮಾಡಿ ಕಳುಹಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.ಕೊಕ್ಕರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿಂಡಿ ಅಣೆಕಟ್ಟಿನ ಕಳಪೆ ಕಾಮಗಾರಿ ಸಮಗ್ರ ತನಿಖಾ ವರದಿಯನ್ನು ವಿಳಂಬಗೊಳಿಸುತ್ತಿರುವ ಬಗ್ಗೆ, ಕಿಂಡಿ ಅಣೆಕಟ್ಟು ಎಲ್ಲೆಡೆಯೂ ಇದೇ ಮಾದರಿ ಎಂಬ ಆಕ್ಷೇಪ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ತೋನ್ಸೆ ವ್ಯಕ್ತಪಡಿಸಿದರು.

    ಇದಕ್ಕೆ ಪೂರಕವಾಗಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್‍ಚಂದ್ರ ಶೆಟ್ಟಿ ಅವರು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಲೋಕಾಯುಕ್ತಕ್ಕೆ ದೂರು ನೀಡುವ ಬಗ್ಗೆ ಪ್ರಸ್ತಾವ ಸಲ್ಲಿಸಿದರು. ಜಿಲ್ಲೆಯ ಹಲವೆಡೆಗಳಲ್ಲಿ ಕಿಂಡಿ ಅಣೆಕಟ್ಟು ನಿರ್ವಹಣೆ ಹಾಗೂ ಕಳಪೆ ಕಾಮಗಾರಿಯಾಗಿದೆ ಎಂಬ ಬಗ್ಗೆ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು.

    ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು ಅವರು, ಅಧಿಕಾರಿಗಳು ಸದಸ್ಯರು ಚರ್ಚಿಸುವ ವಿಷಯಗಳ ಬಗ್ಗೆ ಇನ್ನಷ್ಟು ಜವಾಬ್ದಾರಿಯುತವಾಗಿ ಉತ್ತರಿಸಬೇಕೆಂದು ಸೂಚಿಸಿದರು. ವಾರಾಹಿ ಎಡದಂಡೆ ನಿರ್ವಹಣೆ ಯಾರು, ನಷ್ಟಗಳಿಗೆ ಹೊಣೆ ಯಾರು ಎಂಬ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಬುಶೆಟ್ಟಿ ಅವರ ಪ್ರಶ್ನೆಗೆ ನಿಗಮದ ಅಧಿಕಾರಿಗಳು  ನೀಡಿದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

    ಪ್ರತಾಪ್‍ಚಂದ್ರ ಶೆಟ್ಟಿ ಅವರು ಈ ಸಂಬಂಧ ಪೂರಕ ಮಾಹಿತಿಯೊಂದಿಗೆ ಮುಂದಿನ ಸಾಮಾನ್ಯ ಸಭೆಗೆ ಸಮಗ್ರ ಉತ್ತರ ನೀಡಲು ಕೋರಿದರು. ಸಾಮಾನ್ಯ ಸಭೆಗೂ ಮುಂಚೆ ಈ ಬಗ್ಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಿ ಅಧಿಕಾರಿಗಳಿಂದ ಸೂಕ್ತ ಉತ್ತರ ಒದಗಿಸುವ ಭರವಸೆಯನ್ನು ಸಿಪಿಒ ನೀಡಿದರು.

    ಕಾಡು ಪ್ರಾಣಿಗಳ ಹಾವಳಿ ಹಾಗೂ ಅರಣ್ಯ ಇಲಾಖೆ ಸೊಪ್ಪು ತರಲು, ಕೃಷಿಗೆ ಪೂರಕ ತರ್ಲೆಗಳನ್ನು ಸಂಗ್ರಹಿಸಿದವರ ವಿರುದ್ಧ ಎಫ್‍ಐಆರ್ ಹಾಕಿದ ಬಗ್ಗೆ ಸುರೇಶ್ ಬಟವಾಡೆ, ಗೌರಿ ದೇವಾಡಿಗ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಕೃಷಿಕರ ಪರವಾಗಿ ಅರಣ್ಯ ಇಲಾಖೆ ನಡೆದುಕೊಳ್ಳಬೇಕೆಂದು ಹೇಳಿದರು. ಅಪಾಯಕಾರಿ ಮರಗಳ ಬಗ್ಗೆ ಚಂದ್ರಿಕಾ ಕೇಲ್ಕರ್ ಸಭೆಯ ಗಮನಸೆಳೆದರು.

    ಗಾಂಧಿ ಶಾಲೆ ಬಗ್ಗೆ ಕೋಟೇಶ್ವರದಲ್ಲಿ ಅಂಗನವಾಡಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕುಂದಾಪುರ ತಾಲೂಕು ಆಸ್ಪತ್ರೆಯನ್ನು 180 ಹಾಸಿಗೆಗೆ ಏರಿಸಿ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಡಿಹೆಚ್‍ಒ ಹೇಳಿದರು. ಕುಂಭಾಷಿಯಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಿಸಲು ಜಿಲ್ಲಾ ಪಂಚಾಯತ್ ಸದಸ್ಯರು ಒತ್ತಾಯಿಸಿದರು. ರೇಷ್ಮಾ ಉದಯಶೆಟ್ಟಿ, ಗೌರಿ ದೇವಾಡಿಗ, ಜನಾರ್ದನ ತೋನ್ಸೆ, ಶೋಭಾ ಜಿ. ಪುತ್ರನ್ ಅವರು ಸೇವೆಯನ್ನು ಇನ್ನಷ್ಟು ಉತ್ತಮವಾಗಿ ನೀಡುವ ಬಗ್ಗೆ ಸಲಹೆಗಳನ್ನು ನೀಡಿದರಲ್ಲದೆ, ಕುಂದು ಕೊರತೆ ನಿವಾರಿಸಲು ಮನವಿ ಮಾಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply