LATEST NEWS
ಶ್ರೀಲಂಕಾ ಪ್ರಧಾನಿ ನಾಳೆ ಕೊಲ್ಲೂರಿಗೆ: ಚಂಡಿಕಾ ಹೋಮದಲ್ಲಿ ಭಾಗಿ
ಉಡುಪಿ, ಅಗಸ್ಟ್ 26 :ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮ್ ಸಿಂಘೇ ನಾಳೆ ಕೊಲ್ಲೂರಿಗೆ ಆಗಮಿಸಲಿದ್ದಾರೆ. ನಾಳೆ ಭಾನುವಾರ ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಉಡುಪಿಗೆ ಆಗಮಿಸಲಿರುವ ಅವರು ಬಳಿಕ ಕಾರಿನ ಮೂಲಕ ಕೊಲ್ಲೂರು ಕ್ಷೇತ್ರಕ್ಕೆ ತಲುಪಲಿದ್ದಾರೆ.ಇಲ್ಲಿ ದೇವಿ ಮೂಕಾಂಬಿಕೆಗೆ ವಿಶೇಷ ಪೂಜೆ ನೆರವೇರಿಸಿ ಪ್ರಸಾದ ಸ್ವೀಕರಿಸಲಿರುವ ವಿಕ್ರಮ್ ಸಿಂಘೇ ಬೆಳಿಗ್ಗೆ 11.15 ರಿಂದ 1 ಗಂಟೆಯವರೆಗೆ ದೇವಸ್ಥಾನದಲ್ಲಿ ನಡೆಯಲಿರುವ ಚಂಡಿಕಾ ಹೋಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದೇಶದ ಪ್ರಧಾನಿಯೋರ್ವರು ಚಂಡಿಕಾ ಹೋಮದಲ್ಲಿ ಪಾಲ್ಗೊಳ್ಳುವುದು ಇದೇ ಮೊದಲಬಾರಿಯಾಗಿದೆ. ಅಪರಾಹ್ನ 1.30 ಕ್ಕೆ ಮತ್ತೆ ಬೆಂಗಳೂರಿಗೆ ಹೊರಡಲಿದ್ದಾರೆ ಎಂದು ಶ್ರೀಲಂಕಾ ಪ್ರಧಾನಿ ಸಚಿವಾಲಯ ಮಾಹಿತಿ ನೀಡಿದೆ.
ಪ್ರಧಾನಿ ಅವರೊಂದಿಗೆ ಶ್ರೀಲಂಕಾದ ಡೆಪ್ಯುಟಿ ಹೈಕಮಿಷನರ್ ವಿ. ಕೃಷ್ಣಮೂರ್ತಿ ಹಾಗೂ ಎರಡೂ ದೇಶಗಳ ಹಿರಿಯ ಅಧಿಕಾರಿಗಳು ಬರಲಿದ್ದಾರೆ. ಪ್ರಧಾನಿ ರಾನಿಲ್ ವಿಕ್ರಮಸಿಂಗೆ ಇಂದು ಶನಿವಾರ ಕೊಲ್ಲೂರಿಗೆ ಬರಬೇಕಾಗಿತ್ತು ಆದರೆ ಭದ್ರತೆಯ ಕಾರಣ ಅದನ್ನು ಭಾನುವಾರಕ್ಕೆ ಮುಂದೂಡಲಾಗಿದೆ. ಚಂಡಿಕಾ ಹೋಮದಲ್ಲಿ ಪಾಲ್ಗೊಳ್ಳಲು ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮ್ ಸಿಂಘೇ ಅವರ ಕುಟುಂಬದ ಸದಸ್ಯರು ಈಗಾಗಲೇ ಉಡುಪಿಗೆ ಅಗಮಿಸಿದ್ದಾರೆ. ಅವರು ಭಾನುವಾರ ಮುಂಜಾನೆಯಿಂದಲೇ ಚಂಡಿಕಾ ಹೋಮದ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಪಾಲ್ಗೊಳ್ಳಲಿದ್ದು, ವಿಕ್ರಮ್ ಸಿಂಘೇ ಅವರು ಪೂರ್ಣಾಹುತಿಯ ಸಮಯಲ್ಲಿ ಬಂದು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದ್ದು, ಶ್ರೀಲಂಕಾ ಪ್ರಧಾನಿಯ ಕೊಲ್ಲೂರು ಭೇಟಿಯ ಹಿನ್ನೆಲೆಯಲ್ಲಿ ಅಭೂತ ಪೂರ್ವ ಭದ್ರತಾ ಕ್ರಮಗಳನ್ನು ಪೋಲಿಸ್ ಹಾಗೂ ಸ್ಥಳೀಯಾಡಳಿತ ಕೈಗೊಂಡಿದೆ. ನಾಳೆ ಮುಂಜಾನೆಯಿಂದ ಕೊಲ್ಲೂರು ದೇವಾಲಯಕ್ಕೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ..
You must be logged in to post a comment Login