LATEST NEWS
ರಾಷ್ಟ್ರೀಯ ಹೆದ್ದಾರಿ ಟೋಲ್ ಸಂಗ್ರಹ ನಿಲ್ಲಿಸಿ- ದಿನಕರ ಬಾಬು

ರಾಷ್ಟ್ರೀಯ ಹೆದ್ದಾರಿ ಟೋಲ್ ಸಂಗ್ರಹ ನಿಲ್ಲಿಸಿ- ದಿನಕರ ಬಾಬು
ಉಡುಪಿ, ಜೂನ್ 30: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಸಮರ್ಪಕವಾಗಿಲ್ಲ, ಪೂರ್ಣವೂ ಆಗಿಲ್ಲ, ದುರಸ್ತಿಯೂ ಮಾಡುತ್ತಿಲ್ಲ. ಆದ್ದರಿಂದ ಹೆದ್ದಾರಿ ದುರಸ್ತಿ ಮಾಡುವವರೆಗೆ ಟೋಲ್ ಸಂಗ್ರಹ ನಿಲ್ಲಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಉಡುಪಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಯಿತು.
ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ ಅವರು ಉಡುಪಿ ಸಂತೆಕಟ್ಟೆ ಭಾಗದಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಪಾದಚಾರಿ ಮೇಲ್ಸೇತುವೆ, ಬಸ್ಸು ನಿಲ್ದಾಣ ನಿರ್ಮಾಣ ಏನಾಗಿದೆ ಎಂದು ಪ್ರಶ್ನಿಸಿದರು. ಅದಕ್ಕೆ ಪೂರಕವಾಗಿ ಸದಸ್ಯೆ ಗೀತಾಂಜಲಿ ಸುವರ್ಣ ಅವರು ಕೂಡ ರಸ್ತೆ ದುರಸ್ತಿ ಮಾಡುತ್ತಿಲ್ಲ. ರಸ್ತೆಗಳಲ್ಲಿ ಗುಂಡಿ ಬಿದ್ದು ಅಪಘಾತಗಳಾಗುತ್ತಿದ್ದು, ಪಾಟ್ ಹೋಲ್ ಗಳನ್ನೂ ದುರಸ್ತಿ ಸಹ ಮಾಡುತ್ತಿಲ್ಲ, ಇದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಹೇಳಿದರು. ಕಳೆದ ಅನೇಕ ಸಮಯದಿಂದ ಈ ಸಮಸ್ಯೆ ಪ್ರಸ್ತಾವಿಸುತ್ತಿದ್ದರೂ ಯಾವುದೇ ಪರಿಹಾರ ಸಿಗುತ್ತಿಲ್ಲ ಎಂದು ಜಿ.ಪಂ. ಸದಸ್ಯರು ಹೇಳಿದರು.

ಈ ವೇಳೆ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಗುರುರಾಜ್ ಮಾತನಾಡಿ, ಸಂತೆಕಟ್ಟೆ ಪಾದಾಚಾರಿ ಮೇಲ್ಸೇತುವೆಯ ಪ್ರಸ್ತಾವನೆಯನ್ನು ಕಳೆದ ನವೆಂಬರ್‍ನಲ್ಲಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದು, ಇನ್ನೂ ಅನುಮೋದನೆ ಸಿಕ್ಕಿಲ್ಲ. ನಾವು ಕೇಂದ್ರ ಸಚಿವಾಲಯ ಮತ್ತು ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸುತ್ತೇವೆ, ರಸ್ತೆ ಹದಗೆಟ್ಟರೆ ಅದನ್ನೂ ಹೇಳುತ್ತೇವೆ. ಆದರೆ ಅದನ್ನು ದುರಸ್ತಿಪಡಿಸುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದರು.
ಈ ಉತ್ತರದಿಂದ ಸದಸ್ಯರು ಮತ್ತಷ್ಟು ಅಸಮಾಧಾನಗೊಂಡರು. ಸದಸ್ಯ ಜನಾರ್ದನ ತೋನ್ಸೆ ಅವರು ಹೆದ್ದಾರಿಗೆ ಸಂಬಂಧಿಸಿ ಪ್ರತ್ಯೇಕ ಸಭೆಯನ್ನು ಕರೆಯುವಂತೆ ಮನವಿ ಮಾಡಿದರು. ಶಾಸಕ ರಘುಪತಿ ಭಟ್ ಮಾತನಾಡಿ, ಹೆದ್ದಾರಿ ದುರಸ್ತಿಯನ್ನೂ ಮಾಡದೆ ಟೋಲ್ ಸಂಗ್ರಹಿಸುವುದು ಬೇಡ, ಜಿ.ಪಂ.ನಲ್ಲಿ ಜಿಲ್ಲೆಯ ಎರಡು ಟೋಲ್ ಕೇಂದ್ರಗಳನ್ನು ಮುಚ್ಚುವ ನಿರ್ಣಯ ಕೈಗೊಂಡು, ಯಾವುದೇ ಭದ್ರತೆ ಒದಗಿಸದಂತೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರಿಗೆ ಸಲ್ಲಿಸುವಂತೆ ಸಲಹೆ ನೀಡಿದರು. ಅದರಂತೆ ಟೋಲ್ ಸ್ಥಗಿತಕ್ಕೆ ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲೆಯ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದ್ದು ಅಂತಹ ಆಸ್ಪತ್ರೆಗಳನ್ನು, ಖಾಸಗಿ ವೈದ್ಯಕೀಯ ವಿದ್ಯಾಲಯಗಳಿಗೆ ಮತ್ತು ದೊಡ್ಡ ಖಾಸಗಿ ಆಸ್ಪತ್ರೆಗಳಿಗೆ ನಿರ್ವಹಣೆ ಮಾಡಲು ನೀಡಿದರೆ, ಆ ಸಂಸ್ಥೆಗಳಲ್ಲಿನ ವೈದ್ಯರ ಸೇವೆ ಜನರಿಗೆ ದೊರೆಯುತ್ತದೆ ಈ ಕುರಿತಂತೆ ಜಿಲ್ಲಾ ಪಂಚಾಯತ್ ಮೂಲಕ ನಿರ್ಣಯ ಕೈಗೊಳ್ಳುವಂತೆ ಶಾಸಕ ರಘುಪತಿ ಭಟ್ ತಿಳಿಸಿದರು.
ಉಡುಪಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಉಸ್ತುವಾರಿ ಜಿಲ್ಲಾ ಸರ್ಜನ್ ಅಡಿಯಲ್ಲಿ ಬರಬೇಕು, ಪ್ರಸ್ತುತ ಈ ಆಸ್ಪತ್ರೆಯಲ್ಲಿರುವ ವೈದ್ಯರು ಮತ್ತು ಸಿಬ್ಬಂದಿಯನ್ನು ಅಲ್ಲಿಯೇ ಉಳಿಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಬೇಕು, ಸಂಪೂರ್ಣವಾಗಿ ಆಸ್ಪತ್ರೆಯ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಿದರೆ ಮುಂದೆ ಸಮಸ್ಯೆಯಾಗಲಿದೆ, ಈ ಕುರಿತಂತೆ ನಿರ್ಣಯ ಮಾಡಿ ಕಳುಹಿಸಿದರೆ ವಿಧಾನಸಭೆಯಲ್ಲಿ ಚರ್ಚಿಸಲಾಗುವುದು ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಜಿಲ್ಲೆಯಲ್ಲಿ ಮರಳು ಸಮಸ್ಯೆ ಕುರಿತಂತೆ , ಮರಳುಗಾರಿಕೆಗೆ ಆಗಸ್ಟ್ ಮೊದಲ ವಾರದಲ್ಲಿ ಅನುಮತಿ ನೀಡುವಂತೆ ಹಾಗೂ ಜಿಲ್ಲೆಯಲ್ಲಿ ಮರಳು ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಚರ್ಚೆ ನಡೆಯಿತು.