LATEST NEWS
ಮಲ್ಪೆ ಮೀನುಗಾರ ಸಮಾವೇಶಕ್ಕೆ ತೆರಳಿದವರ ಮೇಲೆ ಕಲ್ಲು ತೂರಾಟ
ಮಲ್ಪೆ ಮೀನುಗಾರ ಸಮಾವೇಶಕ್ಕೆ ತೆರಳಿದವರ ಮೇಲೆ ಕಲ್ಲು ತೂರಾಟ
ಮಂಗಳೂರು ಫೆಬ್ರವರಿ 21: ಉಡುಪಿಯ ಮಲ್ಪೆಯಲ್ಲಿ ಬಿಜೆಪಿ ಮೀನುಗಾರರ ಸಮಾವೇಶಕ್ಕೆ ತೆರಳಿ ಹಿಂದಿರುಗುತ್ತಿದ್ದ ಬಸ್ ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಉಡುಪಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾಗವಹಿಸಿದ್ದ ಮೀನುಗಾರರ ಸಮಾವೇಶ ಕ್ಕೆ ಮಂಗಳೂರು ಹೊರವಲಯದ ಬೆಂಗರೆ ಪ್ರದೇಶ ದಿಂದ ನೂರಾರು ಮೀನುಗಾರರು ತೆರಳಿದ್ದರು. ಆದರೆ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಮೀನುಗಾರರಿದ್ದ ಬಸ್ಸಿಗೆ ಬೆಂಗರೆ ಎಂಬಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಘಟನೆಯ ಬಳಿಕ ಬಸ್ ನಿಲ್ಲಿಸಿ ಬಸ್ ನಲ್ಲಿದ್ದವರೂ ಕೂಡ ಪ್ರತಿಯಾಗಿ ಕಲ್ಲು ತೂರಾಟ ನಡೆಸಿದ್ದಾರೆ. ಉಭಯ ತಂಡಗಳ ನಡುವೆ ಕಲ್ಲು ತೂರಾಟ ನಡೆಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾದ ಹಿನ್ನಲೆಯಲ್ಲಿ ಪರಿಸ್ಥಿತಿ ನಿಭಾಯಿಸಲು ಯತ್ನಿಸಿದ್ದ ಪೊಲೀಸರ ಮೇಲೂ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ, ಈ ಕಲ್ಲುತೂರಾಟದಲ್ಲಿ ಪಿಎಸ್ಐ ಸೇರಿ ಐವರಿಗೆ ಗಾಯಗಳಾಗಿದೆ. ಗಾಯ ಗೊಂಡವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗುಂಪು ಚದುರಿಸಲು ಯತ್ನಿಸುತ್ತಿದ್ದಾಗ ಪೊಲೀಸರ ಮೇಲೂ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಸುರತ್ಕಲ್ ಠಾಣೆಯ ಪಿಎಸ್ಐ ಪೂವಪ್ಪ ಅವರ ತಲೆಗೆ ಕಲ್ಲೇಟಿನಿಂದ ಗಾಯವಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಪರಿಸ್ಥಿತಿ ನಿಯಂತ್ರಿಸಲು ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ರವಾನಿಸಲಾಗಿತ್ತು. ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಪಣಂಬೂರು ಪೊಲೀಸ್ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.