LATEST NEWS
ಅಮಿತ್ ಶಾ ಸ್ವಾಗತದ ಬ್ಯಾನರ್ ಗಳಲ್ಲಿ ಮಿಂಚಿದ ಮೊಯಿದ್ದಿನ್ ಬಾವಾ

ಅಮಿತ್ ಶಾ ಸ್ವಾಗತದ ಬ್ಯಾನರ್ ಗಳಲ್ಲಿ ಮಿಂಚಿದ ಮೊಯಿದ್ದಿನ್ ಬಾವಾ
ಮಂಗಳೂರು ಫೆಬ್ರವರಿ 20: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಸುರತ್ಕಲ್ ಗೆ ಭೇಟಿ ನೀಡುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಸುರತ್ಕಲ್ ನ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಅಮಿತ್ ಶಾಗೆ ಸ್ವಾಗತ ಕೋರುವ ಬ್ಯಾನರ್ ಗಳನ್ನು ಬಂಟಿಂಗ್ಸ್ ಗಳನ್ನು ಹಾಕಿದ್ದರು.
ರಾಷ್ಟ್ರೀಯ ಹೆದ್ದಾರಿ 66ರ ಮಧ್ಯೆ ಇರುವ ರಸ್ತೆ ವಿಭಾಜಕಗಳಲ್ಲಿ ಜಿಲ್ಲೆಯ ಬಿಜೆಪಿ ಮುಖಂಡರು ಅಮಿತ್ ಶಾ ಅವರಿಗೆ ಸ್ವಾಗತ ಕೋರುವ ನಿಟ್ಟಿನಲ್ಲಿ ಫ್ಲೆಕ್ಸ್ ಬ್ಯಾನರ್ ಗಳ ನಡುವೆಯೇ ಸ್ಥಳೀಯ ಶಾಸಕ ಮೊಯಿದೀನ್ ಬಾವಾ ಅವರ ಬ್ಯಾನರ್ ಗಳೂ ಸೇರಿಕೊಂಡಿದ್ದವು.

ಬಿಜೆಪಿ ಮುಖಂಡರು ಎಲ್ಲೆಲ್ಲಾ ಅಮಿತ್ ಶಾ ಗೆ ಸ್ವಾಗತಕೋರಲು ಬ್ಯಾನರ್ ಹಾಕಿದ್ದಾರೋ ಅಲ್ಲೆಲ್ಲಾ ಕಾಂಗ್ರೇಸ್ ಶಾಸಕ ಮೊಯಿದ್ದಿನ್ ಬಾವಾ ತನ್ನ ಕ್ಷೇತ್ರದಲ್ಲಾದ ಅಭಿವೃದ್ದಿ ಕಾಮಗಾರಿಗಳ ಬ್ಯಾನರ್ ನ್ನು ಹಾಕಿದ್ದರು. ಬ್ಯಾನರ್ ಗಳನ್ನು ಕೂಲಂಕುಶವಾಗಿ ಗಮನಿಸದವರಿಗೆ ಮೊಯಿದೀನ್ ಬಾವಾ ಅವರೂ ಅಮಿತ್ ಶಾ ಅವರಿಗೆ ಸ್ವಾಗತ ಕೋರಿ ಬ್ಯಾನರ್ ಹಾಕಿದ್ದಾರೆಯೋ ಎನ್ನುವ ಗೊಂದಲವೂ ಆಗಿದ್ದುಂಟು.
ರಸ್ತೆ ವಿಭಾಜಕದ ಮಧ್ಯೆಯಿರುವ ಪ್ರತಿ ವಿದ್ಯುತ್ ಕಂಬಗಳಿಗೆ ಬಿಜೆಪಿಗರು ಅಮಿತ್ ಶಾ ರಿಗೆ ಸ್ವಾಗತ ಕೋರುವ ಬ್ಯಾನರ್ ಕಟ್ಟಿದ್ದರೆ, ಬಿಜೆಪಿಯವರು ಬ್ಯಾನರ್ ಕಟ್ಟದೆ ಉಳಿಸಿದ್ದ ನಡುವಿನ ಕಂಬಗಳಲ್ಲಿ ಮೊಯಿದೀನ್ ಬಾವಾ ಬ್ಯಾನರ್ ಗಳು ರಾರಾಜಿಸುತ್ತಿದ್ದವು.
ಮೊಯಿದೀನ್ ಬಾವಾರ ಬ್ಯಾನರ್ ಕಟ್ಟಲು ಬಿಜೆಪಿಯವರೇ ವಿದ್ಯುತ್ ಕಂಬ ಬಿಟ್ಟುಕೊಟ್ಟರೋ, ಅಥವಾ ಬಿಜೆಪಿ ಬ್ಯಾನರ್ ತೆಗೆದು ಮೊಯಿದೀನ್ ಬಾವಾ ಬೆಂಬಲಿಗರು ಬ್ಯಾನರ್ ಕಟ್ಟಿದರೋ ಎನ್ನುವ ಸಂಗತಿ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಒಟ್ಟಿನಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ಇಲ್ಲೂ ಬ್ಯಾನರ್ ರಾಜಕೀಯದಲ್ಲಿ ತಾವೇನು ಕಡಿಮೆಯಿಲ್ಲ ಎನ್ನುವುದನ್ನು ಮಾತ್ರ ಜನತೆಗೆ ತೋರಿಸಿಕೊಟ್ಟಿದ್ದಾರೆ.