KARNATAKA
ಮುರ್ಡೇಶ್ವರದಲ್ಲಿ ಶಿಲಾಯುಗದ ಅಪರೂಪದ ರೇಖಾ ಚಿತ್ರಗಳು ಪತ್ತೆ..!
ಉತ್ತರ ಕನ್ನಡ : ಉತ್ತರ ಕನ್ನಡದ ಮುರುಡೇಶ್ವರ ಸಮೀಪದ ಕರೂರು ಗ್ರಾಮದ ಬಳಿ ಬಂಡೆಯ ಮೇಲೆ ಶಿಲಾಯುಗದ ಮಾನವ ಬೇಟೆಯನ್ನು ಸಂಭ್ರಮಿಸುವ ಅಪರೂಪದ ರೇಖಾ ಚಿತ್ರಗಳು ಪತ್ತೆಯಾಗಿವೆ. ಕ್ರಿ.ಪೂ. 1800 ರಿಂದ ಕ್ರಿ.ಪೂ.800ರ ಕಾಲದಲ್ಲಿ ಇದನ್ನು ಕೆತ್ತಿರುವ ಸಾಧ್ಯತೆ ಇದ್ದು ಸಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯದಾಗಿವೆ ಎಂದು ಅಂದಾಜಿಸಲಾಗಿದೆ.
ಈ ರೇಖಾಚಿತ್ರಗಳು ಗುಡ್ನಾಪಿರ, ಸೋಂದಾ, ಕೊಪ್ಪಳ, ಬಳ್ಳಾರಿಯಲ್ಲಿ ಬಂಡೆ ಗಲ್ಲಿನ ಮೇಲೆ ಕೆತ್ತಿದ ರೇಖಾ ಚಿತ್ರ ,ವರ್ಣ ಚಿತ್ರವನ್ನು ಹೋಲುತ್ತವೆ. ಇತಿಹಾಸ ಆರಂಭ ಕಾಲ ಘಟ್ಟದ ಹಾಗೂ ಅದಕ್ಕೂ ಹಿಂದಿನ ಮಾನವ ಸಂಸ್ಕೃತಿ, ಜೀವನವನ್ನು ಇವು ಕಟ್ಟಿಕೊಡಲು ಕೊಂಡಿಯಂತಿವೆ ಎಂದು ಕರ್ನಾಟಕ ವಿಶ್ವ ವಿದ್ಯಾಲಯ, ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಆರ್.ಎಂ ಷಡಕ್ಷರಯ್ಯ ಅಭಿಪ್ರಾಯ ಪಟ್ಟಿದ್ದಾರೆ
ಕರಾವಳಿ ಅಂಚಿನ ಚಿರೆಕಲ್ಲಿನ ಹಾಸಿನ ಮೇಲೆ 20 ರೇಖಾಚಿತ್ರಗಳು ಕೆತ್ತಿರುವುದನ್ನು ಕವಿವಿಯ ತಂಡವು ಪತ್ತೆಹಚ್ಚಿದೆ. ಅವುಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಈ ಪೈಕಿ ಮನುಷ್ಯನ ಚಿತ್ರ, ಬಿಲ್ಲು ಹಿಡಿದಿರುವ ಮನುಷ್ಯನ ಚಿತ್ರ, ಎತ್ತು, ಜಿಂಕೆ ಸೇರಿದಂತೆ ಪ್ರಾಣಿಗಳ ಚಿತ್ರ ಹಾಗೂ ಮನುಷ್ಯ ಮತ್ತು ಪ್ರಾಣಿಗಳ ಕಾಲಿನ ಬಳಿ ಕುಳಿಗಳು ಇರುವುದು ಕಂಡು ಬಂದಿದೆ ಎಂದರು. ಚಿತ್ರಗಳಲ್ಲಿ ಪ್ರಾಣಿಗಳು, ಬಿಲ್ಲು ಹಿಡಿದಿರುವ ಮನುಷ್ಯ ಹಾಗೂ ಎತ್ತನ್ನು ತನ್ನ ಕೈಗೆ ಕಟ್ಟಿಕೊಂಡಿರುವ ಮನುಷ್ಯ ಇರುವುದುರಿಂದ ಈ ಚಿತ್ರಗಳನ್ನು ಬೇರೆ ಬೇರೆ ಕಾಲಮಾನಗಳಲ್ಲಿ ಉಳಿಯಿಂದ ಕೆತ್ತಲಾಗಿದೆ ಎಂದು ಊಹಿಸಲಾಗಿದೆ. ಇಂತಹ ಚಿತ್ರಗಳು ಚಿತ್ರದುರ್ಗದ ಚಂದ್ರವಳ್ಳಿ, ಗೋವಾ, ದಕ್ಷಿಣ ಕನ್ನಡ ಹಾಗೂ ಮಹಾರಾಷ್ಟ್ರದ ಕರಾವಳಿಯಲ್ಲಿ ಸಿಕ್ಕಿವೆ. ಭಟ್ಕಳ ತಾಲೂಕಿನ ಕರೂರಿನಲ್ಲಿ ಸಿಕ್ಕ ಈ ಚಿತ್ರಗಳು ಕ್ರಿ.ಪೂ 1800 ರಿಂದ ಕ್ರಿ.ಪೂ 800 ರ ಕಾಲಮಾನದಲ್ಲಿ ಚಿತ್ರಿಸಲಾಗಿದ್ದು ಸಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯದಾಗಿವೆ ಎಂದಿದ್ದಾರೆ.ಕರ್ನಾಟಕದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ರೇಖಾ ಚಿತ್ರಗಳು ಪತ್ತೆಯಾದುದು ಇದೇ ಮೊದಲು. ಇದರ ಆಸುಪಾಸಿನಲ್ಲಿ ಅಂದಿನ ಜನರ ವಸತಿ ಇರಬಹುದು. ಹೀಗಾಗಿ ಸಂಶೋಧನೆಯನ್ನು ಮುಂದುವರೆಸುತ್ತೇವೆ. ಅಲ್ಲದೆ ಇಲ್ಲಿನ ಸಂಸ್ಕೃತಿಯ ಚರಿತ್ರೆಯನ್ನು ಕಟ್ಟಲು ಈ ನೆಲೆಯು ಬಹು ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.