KARNATAKA
ಮಲ್ಪೆ ಬೀಚ್ ನಲ್ಲಿ ಇಂಜೆಕ್ಷನ್ ಭೀತಿ
ಮಲ್ಪೆ ಬೀಚ್ ನಲ್ಲಿ ಇಂಜೆಕ್ಷನ್ ಭೀತಿ
ಉಡುಪಿ ಸೆಪ್ಟೆಂಬರ್ 12: ಉಡುಪಿ ಪ್ರಸಿದ್ದ ಪ್ರವಾಸಿ ತಾಣ ಮಲ್ಪೆ ಬೀಚ್ ನಲ್ಲಿ ಕಳೆದ ಎರಡು ದಿನಗಳಿಂದ ಬೀಚಿನಲ್ಲಿ ಸಮುದ್ರಕ್ಕೆ ಇಳಿದವರಿಗೆ ತೊರಕೆ ಮೀನು ಅಥವಾ ಸ್ಟಿಂಗ್ ರೇ ಇಂಜೆಕ್ಷನ್ ರುಚಿ ತೋರಿಸಿದೆ.
ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಕಂಡು ಬರುವ ಈ ಮೀನು ಈ ಅವಧಿಗೆ ಸಂತಾನೋತ್ಪತ್ತಿಗಾಗಿ ಕಡಲ ತಡೆಗೆ ಬರುತ್ತದೆ. ಅದರಂತೆ ಈ ವರ್ಷವೂ ಸಾಕಷ್ಟು ಸಂಖ್ಯೆಯಲ್ಲಿ ಮೀನುಗಳು ತೀರ ಸೇರಿವೆ .ಇನ್ನು ಒಂದು ವಾರದವರೆಗೆ ಈ ಮೀನುಗಳು ಸಮುದ್ರ ಕಿನಾರೆಯಲ್ಲಿ ಇರುತ್ತವೆ ಎಂದು ಹೇಳಲಾಗಿದೆ .
ಸಂತಾನೋತ್ಪತ್ತಿಗಾಗಿ ಕಡಲ ಕಿನಾರೆಗೆ ಆಗಮಿಸುವ ಸಂದರ್ಭದಲ್ಲಿ ಈ ತೊರಕೆ ಮೀನುಗಳು ತೀರಾ ಆಕ್ರಮಣಕಾರಿಯಾಗಿದ್ದು, ಸಮುದ್ರದಲ್ಲಿ ಈಜಲು ನೀರಿಗಿಳಿಯುವ ಪ್ರವಾಸಿಗರಿಗೆ ಇದರ ಚೂಪಾದ ಬಾಲದ ಇಂಜೆಕ್ಷನ್ ಭಾಗ್ಯ ಲಭಿಸಿದೆ.
ಕಳೆದ ಶುಕ್ರವಾರದಿಂದ ಮಲ್ಪೆ ಬೀಚ್ ನಲ್ಲಿ ಈ ತೊರಕೆ ಮೀನಿನ ದಾಳಿಯ ಸುಮಾರು 12 ಪ್ರಕರಣಗಳು ವರದಿಯಾಗಿದೆ. ದಾಳಿಗೆ ಒಳಗಾದ ಪ್ರವಾಸಿಗರು ಇಲ್ಲಿರುವ ಲೈಫ್ ಗಾರ್ಡ್ ಗಳ ಬಳಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಹೆಚ್ಚು ಗಾಯಗೊಂಡವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಮುಂಜಾಗೃತೆ:
ತೊರಕೆ ಮೀನು ಬಾಲದ ಮುಳ್ಳಿನಿಂದ ಚುಚ್ಚಿದಾಗ ವಿಪರೀತ ರಕ್ತ ಸ್ರಾವವಾಗುತ್ತದೆ ಹಾಗೂ ತುಂಬಾ ನೋವು ಉಂಟಾಗುತ್ತದೆ. ತೊರಕೆ ಮೀನಿನ ಮುಳ್ಳು ನಂಜಿನ ಗುಣವುಳ್ಳದ್ದರಿಂದ ತೊರಕೆ ಮೀನಿನ ಮುಳ್ಳು ಚುಚ್ಚಿದ ಬಳಿಕ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಪ್ರವಾಸಿಗರಿಗೆ ಎಚ್ಚರಿಕೆ :
ಮಲ್ಪೆ ಬೀಚ್ ನಲ್ಲಿ ತೊರಕೆ ಪ್ರತಾಪ ಕಳೆದ 7 ರಿಂದ 8 ವರ್ಷಗಳಿಂದ ನಡೆಯುತ್ತಿದೆ. ಮಳೆಗಾಲ ಕಳೆಯುತ್ತಿದಂತೆ ಸಮುದ್ರ ನೀರು ತಂಪಾಗುತ್ತದೆ. ಈ ಹಿನ್ನಲೆಯಲ್ಲಿ ಸಮುದ್ರ ತೀರಕ್ಕೆ ಮೊಟ್ಟೆ ಇಡಲು ತೊರೆಕೆಗಳು ಆಗಮಿಸುತ್ತವೆ. ಈ ಹಾವಳಿ ಇನ್ನೂ 10 ದಿನ ಮುಂದುವರೆಯುವ ಸಾಧ್ಯತೆ ಇದ್ದು. ಪ್ರವಾಸಿಗರು ಮಲ್ಪೆ ಬೀಚ್ ನಲ್ಲಿ ಸಮುದ್ರಕ್ಕೆ ಇಳಿಯುವ ಮೊದಲು ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ.