DAKSHINA KANNADA
ಶಿರಾಡಿಘಾಟ್ ಗೆ ಮಳೆಗಾಲದಲ್ಲಿ ಮತ್ತೆ ಬಂದ್ ಭಾಗ್ಯ?
ಶಿರಾಡಿಘಾಟ್ ಗೆ ಮಳೆಗಾಲದಲ್ಲಿ ಮತ್ತೆ ಬಂದ್ ಭಾಗ್ಯ ?
ಮಂಗಳೂರು,ಮೇ 4: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ರಸ್ತೆಯನ್ನು ಮತ್ತೆ ಬಂದ್ ಮಾಡುವ ಯೋಜನೆಯನ್ನು ರಾಜ್ಯ ಸರಕಾರ ಹಮ್ಮಿಕೊಂಡಿದೆ.
ಕಳೆದ ಬಾರಿ ಘಾಟ್ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಘಾಟ್ ರಸ್ತೆಯ ಹನ್ನೆರಡು ಕಡೆಗಳಲ್ಲಿ ಭೂ ಕುಸಿತ ಉಂಟಾಗಿ ರಸ್ತೆಗೆ ಹಾನಿಯಾಗಿತ್ತು.
ಆದರೆ ಜೂನ್ ತಿಂಗಳಿನಲ್ಲಿ ರಸ್ತೆಯ ಸ್ಥಿತಿ ಹೇಗಿತ್ತೋ, ಅದೇ ಸ್ಥಿತಿ ಇಂದಿಗೂ ಶಿರಾಡಿ ಘಾಟ್ ನಲ್ಲಿದೆ.
ರಸ್ತೆಯನ್ನು ದುರಸ್ತಿ ಪಡಿಸಲು ಲೋಕೋಪಯೋಗಿ ಇಲಾಖೆ ಈ ವರೆಗೂ ಅಂದಾಜು ಪಟ್ಟಿ ಸಿದ್ಧಗೊಳಿಸಿಲ್ಲ.
ಅಲ್ಲದೆ ರಸ್ತೆಯ ದುರಸ್ಥಿಗೆ ರಾಜ್ಯ ಸರಕಾರದ ಹಣದ ಬೇಡಿಕೆಯನ್ನು ಕೇಂದ್ರ ಸರಕಾರ ತಿರಸ್ಕರಿಸಿದ ಹಿನ್ನಲೆಯಲ್ಲಿ ಘಾಟ್ ರಸ್ತೆಯ ದುರಸ್ಥಿ ಕಾಮಗಾರಿ ನಡೆದೇ ಇಲ್ಲ.
ಇದೀಗ ಮಳೆಗಾಲ ಸಮೀಪಿಸುತ್ತಿದ್ದಂತೆ ರಾಜ್ಯ ಲೋಕೋಪಯೋಗಿ ಇಲಾಖೆ ತರಾತುರಿಯಲ್ಲಿ ಅಂದಾಜು ಪಟ್ಟಿ ಸಿದ್ಧಪಡಿಸಿ ಮತ್ತೆ ಮಳೆಗಾಲದಲ್ಲಿ ಘಾಟ್ ರಸ್ತೆಯನ್ನು ಬಂದ್ ಮಾಡುವ ಲೆಕ್ಕಾಚಾರದಲ್ಲಿದೆ.
ಬಂದರು ನಗರಿ ಮಂಗಳೂರು ಹಾಗೂ ರಾಜ್ಯ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಢಿಘಾಟ್ ರಸ್ತೆ ಮತ್ತೆ ಮುಚ್ಚುವ ಭೀತಿಯಲ್ಲಿದೆ.
ಈ ರಸ್ತೆಯ ಅಭಿವೃದ್ಧಿಗಾಗಿ ನೂರಾರು ಕೋಟಿ ರೂಪಾಯಿಗಳನ್ನು ಪ್ರತಿವರ್ಷವೂ ಸರಕಾರವು ವಿನಿಯೋಗಿಸುತ್ತಿದ್ದರೂ, ಇಲ್ಲಿನ ಸಮಸ್ಯೆಗೆ ಮಾತ್ರ ಮುಕ್ತಿ ದೊರೆತಂತೆ ಕಾಣುತ್ತಿಲ್ಲ.
ಶಿರಾಡಿಘಾಟ್ ರಸ್ತೆ ಮಳೆಗಾಲದ ಸಂದರ್ಭದಲ್ಲಿ ಸಂಪೂರ್ಣ ಹದಗೆಡುತ್ತಿರುವುದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಗಿನ ಯುಪಿಎ ಸರಕಾರ ಘಾಟ್ ನ ಒಟ್ಟು 26 ಕಿಲೋ ಮೀಟರ್ ರಸ್ತೆಗೆ ಸಂಪೂರ್ಣ ಕಾಂಕ್ರೀಟೀಕರಣ ನಡೆಸುವ ಯೋಜನೆಯನ್ನು ರೂಪಿಸಿತ್ತು.
ಒಟ್ಟು 116 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲೂ ಯೋಜನೆ ತಯಾರಿಸಲಾಗಿತ್ತು.
2013 ರಲ್ಲಿ ಕೇಂದ್ರ ಸಚಿವ ಅಸ್ಕರ್ ಫೆರ್ನಾಂಡೀಸ್ ಈ ಯೋಜನೆಗೆ ಚಾಲನೆಯನ್ನೂ ನೀಡಿದ್ದರು. ಈ ಸಂಬಂಧ ಎರಡು ಹಂತದಲ್ಲಿ ಕಾಮಗಾರಿ ನಡೆಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿತ್ತು.
ಆ ಪ್ರಕಾರ 2013 ಜನವರಿಯಲ್ಲಿ ಮೊದಲ ಹಂತದ 13 ಕಿಲೋಮೀಟರ್ ಕಾಮಗಾರಿಯನ್ನು ಪೂರ್ಣಗೊಳಿಸಲು ಜನವರಿ ತಿಂಗಳಿನಿಂದ ಆಗಸ್ಟ್ ತಿಂಗಳವರೆಗೆ ಘಾಟ್ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು.
ಮತ್ತೆ ಎರಡನೇ ಹಂತದ ಕಾಮಗಾರಿಯನ್ನು 2017-18 ಸಾಲಿನಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಈ ಸಂಬಂಧ ಫೆಬ್ರವರಿಯಿಂದ ಜೂನ್ ವರೆಗೆ ಮತ್ತೆ ಘಾಟ್ ರಸ್ತೆಯನ್ನು ಬಂದ್ ಮಾಡಲಾಗಿತ್ತು.
ಸಾರ್ವಜನಿಕರ ಒತ್ತಡದ ಮೇರೆಗೆ ಜೂನ್ ತಿಂಗಳಿನಲ್ಲಿ ಘಾಟ್ ರಸ್ತೆಯನ್ನು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.
ಆದರೆ ಜೂನ್ ತಿಂಗಳಿನಲ್ಲಿ ಘಾಟ್ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಾಮಗಾರಿ ನಡೆದಿದ್ದ ಸುಮಾರು ಹನ್ನೆರಡು ಕಡೆಗಳಲ್ಲಿ ಭೂಕುಸಿತ ಹಾಗೂ ಗುಡ್ಡ ಕುಸಿತ ಉಂಟಾದ ಪರಿಣಾಮ ಮತ್ತೆ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಯಿತು.
ಈ ನಡುವೆ ಅಡ್ಡಹೊಳೆಯಿಂದ ಗುಂಡ್ಯಾ ವರೆಗಿನ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗಿತ್ತು.
ಮಳೆಗಾಲ ಮುಗಿದ ಬಳಿಕ ಘಾಟ್ ರಸ್ತೆಯನ್ನು ವಾಹನ ಸಂಚಾರಕ್ಕೆ ಯೋಗ್ಯವಾಗಿ ಮಾಡುವ ನಿಟ್ಟಿನಲ್ಲಿ ಸಣ್ಣಪುಟ್ಟ ಮಾರ್ಪಾಡುಗಳ ಮೂಲಕ ವಾಹನ ಸಂಚಾರಕ್ಕೆ ನವಂಬರ್ ತಿಂಗಳಿನಿಂದ ಮತ್ತೆ ಅವಕಾಶ ನೀಡಲಾಗಿತ್ತು.
ಆದರೆ ಇದೀಗ ಶಿರಾಡಿಘಾಟ್ ರಸ್ತೆಯನ್ನು ಮತ್ತೆ ದುರಸ್ಥಿ ನೆಪದಲ್ಲಿ ಮಳೆಗಾಲದಲ್ಲಿ ಬಂದ್ ಮಾಡುವ ಯೋಜನೆಯನ್ನು ಲೋಕೋಪಯೋಗಿ ಇಲಾಖೆ ಹಮ್ಮಿಕೊಂಡಿದೆ.
ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿ ರಿಟೈನಿಂಗ್ ವಾಲ್ ಜೊತೆಗೆ ವಿವಿಧ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ ತಡೆಗೋಡೆ ನಿರ್ಮಿಸಲು ಕೇಂದ್ರ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದರು.
ಈ ಕಾಮಗಾರಿಗಳಿಗೆ ಸುಮಾರು 20 ರಿಂದ 25 ಕೋಟಿ ರೂಪಾಯಿಗಳ ಅಂದಾಜು ಪಟ್ಟಿಯನ್ನೂ ತಯಾರಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಆದರೆ ಇದಕ್ಕೆ ಒಪ್ಪಿಕೊಳ್ಳದ ಲೋಕೋಪಯೋಗಿ ಇಲಾಖೆ ಸಚಿವರು ಕೇಂದ್ರ 60 ಕೋಟಿ ರೂಪಾಯಿಗಳನ್ನು ಕೊಡುವಂತೆ ಪಟ್ಟು ಹಿಡಿದ ಪರಿಣಾಮ ದುರಸ್ಥಿ ಕಾಮಗಾರಿ ಈ ತನಕವೂ ಸ್ಥಗಿತಗೊಳ್ಳುವಂತಾಗಿದೆ.
ಇದೀಗ ಮಳೆಗಾಲಕ್ಕೆ ಘಾಟ್ ರಸ್ತೆಯನ್ನು ಮುಚ್ಚಬೇಕು ಎನ್ನುವ ಕಾರಣಕ್ಕಾಗಿಯೇ ಲೋಕೋಪಯೋಗಿ ಇಲಾಖೆ ತರಾತುರಿಯಲ್ಲಿ ಅಂದಾಜು ಪಟ್ಟಿಯನ್ನು ತಯಾರಿಸಲು ಆರಂಭಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಶಿರಾಡಿಘಾಟ್ ರಸ್ತೆ ಕಾಮಗಾರಿಗೆ ಬೇಕಾದ ಹಣವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದರೆ, ರಾಜ್ಯ ಲೋಕೋಪಯೋಗಿ ಇಲಾಖೆ ಈ ಇದರ ಕಾಮಗಾರಿಗಳನ್ನು ನಡೆಸುತ್ತದೆ.
ಕೇಂದ್ರ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಮಳೆಗಾಲದಲ್ಲಿ ಸಂಭವಿಸಿದ ಶಿರಾಡಿಘಾಟ್ ರಸ್ತೆಯ ಹಾನಿಯನ್ನು ವೀಕ್ಷಿಸಿದ್ದು, ಗ್ಯಾಬಿಯನ್ ತಂತ್ರಜ್ಞಾನದ ಮೂಲಕ ತಡೆಗೋಡೆ ನಿರ್ಮಿಸಲೂ ಸೂಚಿಸಿದ್ದಾರೆ ಎನ್ನಲಾಗಿದೆ.
ಇದಕ್ಕೆ ಸುಮಾರು 20 ರಿಂದ 25 ಕೋಟಿ ರೂಪಾಯಿಗಳ ಅಂದಾಜು ಪಟ್ಟಿಯನ್ನು ತಯಾರಿಸುವಂತೆಯೂ ರಾಜ್ಯ ಲೋಕೋಪಯೋಗಿ ಇಲಾಖೆಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
ಆದರೆ ಕೇಂದ್ರದ ಅಧಿಕಾರಿಗಳ ಸೂಚನೆಯನ್ನು ರಾಜ್ಯ ಸರಕಾರ ಒಪ್ಪಿಕೊಂಡಿಲ್ಲ. ಕನಿಷ್ಟ 60 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಬೇಕೆಂದು ಲೋಕೋಪಯೋಗಿ ಇಲಾಖೆಯ ಸಚಿವರೇ ಕೇಂದ್ರವನ್ನು ಒತ್ತಾಯಿಸಿದ್ದಾರೆ.
ಈ ನಡುವೆ ಎರಡೂ ಕಡೆಗಳಲ್ಲಿ ಗೊಂದಲ ಉಂಟಾದ ಕಾರಣ ಮಳೆಗಾಲ ಮುಗಿದು ಒಂದು ವರ್ಷವಾದರೂ ದುರಸ್ತಿ ಕಾಮಗಾರಿಯನ್ನು ನಡೆಸಲಾಗಿಲ್ಲ.
ಇದೀಗ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ತರಾತುರಿಯಲ್ಲಿ ಅಂದಾಜು ವೆಚ್ಚ ತಯಾರಿಸಿ, ಟೆಂಟರ್ ಕರೆಯುವ ಪ್ರಕ್ರಿಯೆಗೆ ರಾಜ್ಯ ಸರಕಾರ ತೀರ್ಮಾನಿಸಿದೆ ಎನ್ನುವ ಮಾಹಿತಿ ಲೋಕೋಪಯೋಗಿ ಇಲಾಖೆಯಿಂದಲೇ ತಿಳಿದು ಬಂದಿದೆ.
ರಾಜ್ಯ ಸರಕಾರದ ಈ ನಿರ್ಧಾರಕ್ಕೆ ಇದೀಗ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ. ಕಾಮಗಾರಿ ಆರಂಭಿಸುವುದಾದರೆ ಮಳೆಗಾಲದ ಬಳಿಕವೇ ಆರಂಭಿಸಬೇಕು ಎನ್ನುವ ಒತ್ತಾಯವನ್ನೂ ಮಾಡುತ್ತಿದ್ದಾರೆ.
ಕಳೆದ ಮಳೆಗಾಲದಲ್ಲಿ ರಸ್ತೆ ಕುಸಿತವಾದಂತೆ ಈ ಬಾರಿಯೂ ಆಗಲಿ ಎನ್ನುವ ಉದ್ಧೇಶದಿಂದಲೇ ದುರಸ್ತಿ ಕಾಮಗಾರಿಯನ್ನು ನಡೆಸದೇ ಉಳಿಸಿದ್ದಾರೆಯೇ ಎನ್ನುವ ಅನುಮಾನ ಕಾಡಲಾರಂಭಿಸಿದೆ.
ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತಿರುವ ಶಿರಾಡಿ ಘಾಟ್ ರಸ್ತೆಯ ಸಮಸ್ಯೆಗೆ ಒಂದು ವೇಳೆ ಶಾಶ್ವತ ಪರಿಹಾರ ದೊರೆತಲ್ಲಿ, ಇವರ ವ್ಯವಹಾರಕ್ಕೆ ಪೆಟ್ಟು ಬೀಳಲಿದೆ ಎನ್ನುವ ದೂರಾಲೋಚನೆಯೇ ಈ ಕಾಮಗಾರಿಗಳ ವಿಳಂಬಕ್ಕೆ ಕಾರಣವೇ ಎನ್ನುವ ಮಾತೂ ಕೇಳಿ ಬರಲಾರಂಭಿಸಿದೆ.