LATEST NEWS
ಹೊಸವರ್ಷದ ಆರಂಭದಲ್ಲೇ ದೊಡ್ಡ ದುರಂತ – ಮಾತಾ ವೈಷ್ಣೋ ದೇವಿ ದೇಗುಲದಲ್ಲಿ ಕಾಲ್ತುಳಿತಕ್ಕೆ 12 ಮಂದಿ ಬಲಿ
ಜಮ್ಮು: ಪ್ರಸಿದ್ಧ ಮಾತಾ ವೈಷ್ಣೋ ದೇವಿ ದೇಗುಲದಲ್ಲಿ ಉಂಟಾದ ಭಕ್ತರ ನೂಕು ನುಗ್ಗಲಿನ ವೇಳೆ ಕಾಲ್ತುಳಿತದಲ್ಲಿ ಕನಿಷ್ಠ 12 ಜನರು ಮೃತಪಟ್ಟ ಘಟನೆ ನಡೆದಿದೆ. ಹೊಸವರ್ಷದ ಅಂಗವಾಗಿ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ದೇವಿ ದೇವಾಲಯಕ್ಕೆ ಆಗಮಿಸಿದ್ದು ಈ ಕಾಲ್ತುಳಿತಕ್ಕೆ ಕಾರಣ ಎಂದು ಹೇಳಲಾಗಿದೆ.
ತ್ರಿಕೂಟ ಬೆಟ್ಟಗಳ ಮೇಲಿರುವ ದೇಗುಲದ ಗರ್ಭಗುಡಿಯ ಹೊರಗೆ ಮುಂಜಾನೆ 2.45ರ ಸುಮಾರಿಗೆ ಕಾಲ್ತುಳಿತ ಸಂಭವಿಸಿದೆ. ಯಾತ್ರಾರ್ಥಿಗಳ ನಡುವೆ ವಾಗ್ವಾದ ನಡೆದು, ಒಬ್ಬರಿಗೊಬ್ಬರು ತಳ್ಳಿದ ವೇಳೆ ಘಟನೆ ನಡೆದಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.
ಸದ್ಯ 12 ಜನರು ಮೃತಪಟ್ಟಿರುವುದು ದೃಢಪಟ್ಟಿದ್ದು, ಮೃತ ದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡಿರುವ 13 ಜನರನ್ನು ಮಾತಾ ವೈಷ್ಣೋ ದೇವಿ ನಾರಾಯಣ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಸೇರಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಹಲವರ ಸ್ಥಿತಿ ಗಂಭೀರವಾಗಿದೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಮೃತರ ಕುಟುಂಬಕ್ಕೆ ತಲಾ ₹ 10 ಲಕ್ಷ ಮತ್ತು ಗಾಯಾಳುಗಳಿಗೆ ತಲಾ ₹ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.