LATEST NEWS
ಮೂವರು ಯುವಕರ ಮೇಲೆ ಮಾರಕಾಯುಧಗಳಿಂದ ದಾಳಿ ಓರ್ವನ ಸ್ಥಿತಿ ಗಂಭೀರ
ಮೂವರು ಯುವಕರ ಮೇಲೆ ಮಾರಕಾಯುಧಗಳಿಂದ ದಾಳಿ ಓರ್ವನ ಸ್ಥಿತಿ ಗಂಭೀರ
ಮಂಗಳೂರು ಎಪ್ರಿಲ್ 9: ಮೂವರು ಯುವಕರ ಮೇಲೆ ತಂಡವೊಂದು ಮಾರಕಾಯುಧಗಳಿಂದ ದಾಳಿ ನಡೆಸಿದ ಘಟನೆ ಮಂಗಳೂರು ಸಮೀಪದ ಕಸಬ ಬೆಂಗ್ರೆಯಲ್ಲಿ ನಡೆದಿದೆ.ಕಸಬ ಬೆಂಗ್ರೆ ನಿವಾಸಿಗಳಾದ ಅನ್ವೀಝ್, ಸಿರಾಜ್ ಹಾಗೂ ಇಝಾದ್ ದಾಳಿಗೊಳಗಾದವರು. ಗಾಯಾಳುಗಳ ಪೈಕಿ ಅನ್ವೀಝ್ ಸ್ಥಿತಿ ಗಂಭೀರವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಮೂವರು ಯುವಕರು ನಿನ್ನೆ ರಾತ್ರಿ ಕಸಬ ಬೆಂಗ್ರೆಯಿಂದ ತಣ್ಣೀರುಬಾವಿ ಕಡೆಗೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಇವರು ಸಂಚರಿಸುತ್ತಿದ್ದ ದ್ವಿಚಕ್ರ ವಾಹನವನ್ನು ಕಸಬ ಬೆಂಗ್ರೆಯ ಫುಟ್ಬಾಲ್ ಮೈದಾನದ ಬಳಿ ಆರು ಮಂದಿಯಿದ್ದ ಮುಸುಕುಧಾರಿಗಳ ತಂಡ ಅಡ್ಡಗಟ್ಟಿ ಮಾರಕಾಯುಧಗಳಿಂದ ದಾಳಿ ನಡೆಸಿದ್ದಾರೆ.
ಈ ವೇಳೆ ಅನ್ವೀಝ್ ತೀವ್ರ ದಾಳಿಗೊಳಗಾದರೆ, ಸಿರಾಜ್ ಹಾಗೂ ಇಝಾದ್ ದಾಳಿಗೊಳಗಾದರೂ ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಅವರಿಬ್ಬರು ಕರೆ ಮಾಡಿ ತಮ್ಮ ಗೆಳೆಯರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ ಗೆಳೆಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಫುಟ್ಬಾಲ್ ಮೈದಾನದಲ್ಲಿ ಗಂಭೀರ ಗಾಯಗಳೊಂದಿಗೆ ಬಿದ್ದಿದ್ದ ಅನ್ವೀಝ್ ಅವರನ್ನು ಮೀನುಗಾರಿಕೆ ತೆರಳುತ್ತಿದ್ದವರು ಗಮನಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ದಾಳಿ ಪ್ರಕರಣಕ್ಕೆ ಸಂಬಂಧಿಸಿ ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
You must be logged in to post a comment Login