LATEST NEWS
ಸೃಷ್ಟಿ ಗೋಸ್ವಾಮಿ ಉತ್ತರಾಖಂಡದ ‘ಏಕ್ ದಿನ್ ಕಾ ಸಿಎಂ’!
ಡೆಹ್ರಾಡೂನ್, ಜನವರಿ 24: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವಾದ ಜನವರಿ 24ರಂದು ಹರಿದ್ವಾರ ಮೂಲದ ಸೃಷ್ಟಿ ಗೋಸ್ವಾಮಿ (19) ಅವರು ಉತ್ತರಾಖಂಡದ ಒಂದು ದಿನದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ರಾಜ್ಯದ ಬೇಸಿಗೆ ರಾಜಧಾನಿಯಾದ ಗೈರ್ಸೈನಿಂದ ಅವರು ಆಡಳಿತ ನಡೆಸಲಿದ್ದು, ರಾಜ್ಯ ಸರ್ಕಾರ ನಡೆಸುವ ವಿವಿಧ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
ಜೀವಮಾನದಲ್ಲಿ ಒಮ್ಮೆ ಇಂತಹ ಅವಕಾಶ ಗಿಟ್ಟಿಸಿಕೊಂಡ ಗೋಸ್ವಾಮಿ, ಮೂರನೇ ವರ್ಷದ ಬಿಎಸ್ಸಿ ವಿದ್ಯಾರ್ಥಿಯಾಗಿದ್ದು, ‘ಇದು ನಿಜವೇ ಎಂದು ನಾನು ನಂಬಲಾರೆ. ನಾನು ತುಂಬಾ ಶಾಕ್ ನಲ್ಲಿದ್ದೇನೆ. ಆದರೆ ಅದೇ ಸಮಯದಲ್ಲಿ, ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವಾಗ ಯುವಕರು ಆಡಳಿತದಲ್ಲಿ ಉತ್ತಮ ಸಾಧನೆ ಮಾಡಬಲ್ಲರು ಎಂಬುದನ್ನು ಸಾಬೀತು ಮಾಡಲು ನಾನು ಪ್ರಯತ್ನಿಸುತ್ತೇನೆ’ ಎಂದು ಅವರು ಹೇಳಿದರು.
ಅಟಲ್ ಆರೋಗ್ಯ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ, ಪ್ರವಾಸೋದ್ಯಮ ಇಲಾಖೆಯಿಂದ ಹೋಂಸ್ಟೇ ಯೋಜನೆ, ಮತ್ತಿತರ ಅಭಿವೃದ್ಧಿ ಯೋಜನೆಗಳು ಸೇರಿದಂತೆ ಹಲವು ಯೋಜನೆಗಳನ್ನು ಅವರು ವಿಮರ್ಶಿಸುತ್ತಾರೆ.
ಗೋಸ್ವಾಮಿ ಅವರು 2018ರಿಂದ ಬಾಲ ವಿಧಾನ ಸಭಾ (ಮಕ್ಕಳ ರಾಜ್ಯ ಸಭೆ) ಸಿಎಂ ಆಗಿ ಕೆಲಸ ಮಾಡಿದ್ದಾರೆ. ಸಿಎಂ ಆಗಿ ಕೆಲಸ ಮಾಡುವ ಮುನ್ನ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ವಿವರ ನೀಡಲಿದ್ದಾರೆ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಉತ್ತರಾಖಂಡ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ. ಆಯೋಗದ ಅಧ್ಯಕ್ಷೆ ಉಷಾ ನೇಗಿ ಮಾತನಾಡಿ, ಗೈರ್ಸೈನ ರಾಜ್ಯ ಅಸೆಂಬ್ಲಿ ಕಟ್ಟಡದಲ್ಲಿ ಈಗಾಗಲೇ ಈ ಬಗ್ಗೆ ಸಿದ್ಧತೆಗಳು ನಡೆದಿವೆ. ಸೃಷ್ಟಿ ಕೆಲವು ದಿನಗಳಿಂದ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ಸಾಮರ್ಥ್ಯನಮಗೆ ಚೆನ್ನಾಗಿ ತಿಳಿದಿದೆ’ ಎಂದು ಹೇಳಿದ್ದಾರೆ.