LATEST NEWS
ರಸ್ತೆ ಮೂಲಕ ಕೊಲ್ಲೂರು ತಲುಪಿದ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ
ರಸ್ತೆ ಮೂಲಕ ಕೊಲ್ಲೂರು ತಲುಪಿದ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ
ಮಂಗಳೂರು ಜುಲೈ 26: ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನಲೆ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ರಸ್ತೆ ಮೂಲಕ ಕೊಲ್ಲೂರಿಗೆ ತೆರಳಿದ್ದಾರೆ.
ಕೊಲ್ಲೂರು ಶ್ರೀ ಮೂಕಾಂಬಿಕೆ ದರ್ಶನಕ್ಕೆ ಎರಡನೇ ಭಾರಿ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಆಗಮಿಸಿದ್ದಾರೆ. ಇಂದು ಬೆಳಿಗ್ಗೆ 8.40ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅವರು ನಂತರ ಹೆಲಿಕಾಪ್ಟರ್ ಮೂಲಕ ಕೊಲ್ಲೂರಿಗೆ ತಲುಪಬೇಕಿತ್ತು. ಆದರೆ ಮುಂಜಾನೆಯಿಂದಲೇ ಬಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹೆಲಿಕಾಪ್ಟರ್ ಪ್ರಯಾಣ ಸಾಧ್ಯವಾಗಲಿಲ್ಲ , ಈ ಹಿನ್ನಲೆಯಲ್ಲಿ ರಸ್ತೆ ಮೂಲಕವೇ ಕೊಲ್ಲೂರು ಗೆ ತೆರಳಿದ್ದಾರೆ. ಅವರು ರಸ್ತೆ ಮೂಲಕ ಇದೀಗ ಕೊಲ್ಲೂರಿಗೆ ತೆರಳುವ ಹಿನ್ನಲೆಯಲ್ಲಿ ರಸ್ತೆಯುದ್ದಕ್ಕೂ ಭಾರಿ ಭದ್ರತೆ ಏರ್ಪಡಿಸಲಾಗಿದೆ.
ಶ್ರೀಲಂಕಾ ಪ್ರಧಾನಿ ಅವರು ಕೊಲ್ಲೂರು ಭೇಟಿ ಹಿನ್ನಲೆ ಕೊಲ್ಲೂರು ಶ್ರೀಮೂಕಾಂಬಿಕಾ ದೇವಾಲಯಕ್ಕೆ ಶುಕ್ರವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2.30ರವರೆಗೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ರನಿಲ್ ವಿಕ್ರಮಸಿಂಘೆ ಅವರು ದೇವಸ್ಥಾನದಲ್ಲಿ ಕ್ಷೇತ್ರದ ಹಿರಿಯ ಅರ್ಚಕ ಡಾ.ಎನ್.ನರಸಿಂಹ ಅಡಿಗ ಅವರ ನೇತೃತ್ವದಲ್ಲಿ ನಡೆಯುವ ನವ ಚಂಡಿಕಾ ಹೋಮದ ಪೂರ್ಣಾಹುತಿಯಲ್ಲಿ ಪಾಲ್ಗೊಳ್ಳಲಿರುವ ಅವರು ದೇವಿಯ ದರ್ಶನ ಪಡೆದು, ಹೋಮದ ಪ್ರಸಾದ ಸ್ವೀಕರಿಸಿ ತೆರಳಲಿದ್ದಾರೆ.