LATEST NEWS
ಉಡುಪಿ ಎಸ್ಪಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ನಡುವೆ ಮಾತಿನ ಚಕಮಕಿ – ಸಾಕು ಸುಮ್ನಿರಪ್ಪಾ , ಜಾಸ್ತಿ ಆಯ್ತು ಇದು ಎಂದ ಸಚಿವೆ
ಉಡುಪಿ ನವೆಂಬರ್ 25: ಉಡುಪಿ ಜಿಲ್ಲೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರಿಗೂ ಜಿಲ್ಲೆಯ ಎಸ್ಪಿ ಅರುಣ್ ಅವರ ನಡುವೆ ಜಟಾಪಟಿ ನಡೆದಿ ಘಟನೆ ನಡೆದಿದೆ. ಈ ಸರ್ಕಾರದಲ್ಲಿ ಪ್ರತಿಭಟನೆ ಮಾಡಿದವರಿಗೆ ನೋಟಿಸ್ ನೀಡಲಾಗುತ್ತದೆ. ರಾಜ್ಯದಲ್ಲೇನು ತುಘಲಕ್ ಆಡಳಿತ ನಡೆಯುತ್ತಿದೆಯಾ? ಇದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಎದುರಿನಲ್ಲಿಯೇ ಮಾಡಿದ ಗಂಭೀರ ಆರೋಪ.
ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ, ಸುನಿಲ್ ಕುಮಾರ್, ಇತ್ತೀಚೆಗೆ ಲಾರಿ ಮಾಲಕರು ಮತ್ತು ಕಾರ್ಮಿಕರು ನಡೆಸಿದ ಮುಷ್ಕರಕ್ಕೆ ಪೋಲಿಸ್ ಇಲಾಖೆ ನೋಟೀಸ್ ನೀಡಿದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಎಸ್ಪಿ ಅರುಣ್ ಕೂಡ ತೀವ್ರವಾಗಿ ಪ್ರತಿಕ್ರಿಯಿಸಿದ್ದ ವಾತಾವರಣ ಕಾವೇರುವಂತೆ ಮಾಡಿತು. ಇತ್ತೀಚೆಗೆ ಕಟ್ಟಡ ಸಾಮಗ್ರಿ ಸಾಗಾಟ ಲಾರಿಗಳ ಮೇಲೆ ಪೋಲಿಸರ ಕ್ರಮದ ವಿರುದ್ಧ, ಲಾರಿ ಮಾಲಕರು, ಚಾಲಕರು ಮತ್ತು ಕಾರ್ಮಿಕರು ಹೆದ್ದಾರಿಯಲ್ಲಿ ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದರು. ಅದಕ್ಕೆ ಎಸ್ಪಿ ಪ್ರತಿಭಟನಾಕಾರರಿಗೆ ನೀಡಿದ್ದಾರೆ, ಅಂದರೇನು ಅರ್ಥ, ಇದೇನು ತುಘಲಕ್ ಆಡಳಿತನಾ, ಜಿಲ್ಲೆಯಲ್ಲಿ ಇನ್ನು ಪ್ರತಿಭಟನೆ ಮಾಡುವಂತೆಯೇ ಇಲ್ಲಾ ಎಂದು ಪ್ರಶ್ನಿಸಿದರು.
ಇನ್ನು ಮುಂದೆ ಜಿಲ್ಲೆಯಲ್ಲಿ ಯಾವ ರೀತಿ ಪ್ರತಿಭಟನೆ ಮಾಡಬೇಕೆಂದು ಸುತ್ತೋಲೆಯನ್ನು ಹೊರಡಿಸಿ, ಮನೆಯಲ್ಲಿ ಕೂತು ಭಜನೆ ಮಾಡಿ, ಮನೆಯಲ್ಲಿ ಪ್ರತಿಭಟನೆ ಮಾಡಿ ಎಂದು ಹೇಳಿ ಬಿಡಿ, ಈ ಸರ್ಕಾರದಲ್ಲಿ ಪ್ರತಿಭಟನೆ ಮಾಡಿದರೆ ನೋಟಿಸ್ ಬರುತ್ತದೆ ಎಂದು ನಾವೂ ಜನರಿಗೆ ಹೇಳಿ ಬಿಡುತ್ತೇವೆ ಎಂದು ರೇಗಿದರು. ಇದಕ್ಕೆ ಎಸ್ಪಿ ಅವರು, ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ ಮಾಡಲು ಅವಕಾಶ ಇಲ್ಲ. ಕಾನೂನು ಪ್ರಕಾರ ನೋಟಿಸ್ ನೀಡಿದ್ದೇವೆ, ಅವರು ಅದಕ್ಕೆ ಉತ್ತರಿಸಲಿ, ಇಲ್ಲಿ ಚರ್ಚೆ ಮಾಡುವುದಕ್ಕಿಂದ ಅವರು ಸೆಷನ್ಸ್ ಅಥವಾ ಹೈಕೋರ್ಟಿಗೆ ಹೋಗಲಿ ಎಂದರು. ಇದರಿಂದ ಇನ್ನಷ್ಟು ಗರಂ ಆದ ಸುನೀಲ್ ಕುಮಾರ್ ನಿಮ್ಮ ನೋಟಿಸ್ ಗೆ ಹೆದರುವುದಿಲ್ಲ, ಹೈಕೋರ್ಟ್ ಹೋಗಿ ಎಂದು ನೀವು ಹೇಳಬೇಕಾಗಿಲ್ಲ. ಇನ್ನು ಮುಂದೆ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡಿದ್ರೆ ಈ ರೀತಿ ನೊಟೀಸ್ ನೀಡಲಾಗುತ್ತದೆಯೇ ಎಂದು ಉಸ್ತುವಾರಿ ಸಚಿವರು ಸ್ಪಷ್ಟಪಡಿಸಬೇಕು ಎಂದರು.
ಇಷ್ಟೆಲ್ಲಾ ಮಾತಿನ ಚಕಮಕಿ ನಡೆಯುವಾಗ ಸುಮ್ಮನಿದ್ದ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಕ್ಟರ್, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು ಅವರವರ ಹಕ್ಕು, ರಾಜ್ಯದಲ್ಲಿ ಈ ರೀತಿ ವೆಹಿಕಲ್ ನಿಲ್ಲಿಸಿ ಪ್ರತಿಭಟನೆ ಮಾಡಿದ್ದಕ್ಕೆ ನೋಟಿಸ್ ಕೊಟ್ಟಿದ್ದಾರಾ, ಹಾಗಿದ್ರೆ ಪ್ರತಿಭಟನೆ ಹೆಂಗೆ ಮಾಡಬೇಕು. ಲಾರಿಗಳನ್ನು ರಸ್ತೆಯಲ್ಲಿ ನಿಲ್ಲಿಸಿಯೇ ಪ್ರತಿಭಟನೆ ಮಾಡಬೇಕು, ಮನೆಯಲ್ಲಿ ನಿಲ್ಲಿಸಿ ಪ್ರತಿಭಟನೆ ಮಾಡ್ಲಿಕ್ಕಾಗುತ್ತಾ ಎಂದು ಎಸ್ಪಿ ಅವರನ್ನು ಪ್ರಶ್ನಿಸಿದರು.
ನಂತರವೂ ಶಾಸಕರ ಮತ್ತು ಎಸ್ಪಿ ಮಧ್ಯೆ ವಾದ ಮುಂದುವರಿದಾಗ, ಸಚಿವೆ ಅವರು ಸಾಕು ಸುಮ್ನಿರಪ್ಪಾ , ಜಾಸ್ತಿ ಆಯ್ತು ಇದು ಎಂದು ಬ್ರೇಕ್ ಹಾಕಿದರು, ಬೇರೆನಾದರೂ ವಿಷಯ ಇದೆಯಾ ಚರ್ಚೆಗೆ ಎಂದು ಸಭೆ ಮುನ್ನಡೆಸಿದರು.