Connect with us

    LATEST NEWS

    ಮಹಿಳಾ ದಿನಾಚರಣೆ ಕಾರ್ಕಳದಲ್ಲೊಂದು ವಿಶೇಷ….ಅಮ್ಮ ಅತ್ತೆ ಮತ್ತು ಹೆಂಡತಿಗೆ ಸಂಮಾನ !!

    ಕಾರ್ಕಳ ಮಾರ್ಚ್ 09: ಮಹಿಳಾ ದಿನಾಚರಣೆಯ ದಿನ ಹತ್ತಾರು ಕಡೆಗಳಲ್ಲಿ ಅನೇಕ ಸಂಘ ಸಂಸ್ಥೆಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸಂಮಾನಿಸುವುದೂ ಅದರ ಭಾಗವಾಗಿ ನಡೆದೇ ನಡೆಯುತ್ತವೆ . ಆದರೆ ಇಲ್ಲೊಬ್ಬರು ತನ್ನ ಅಮ್ಮ‌,ಹೆಣ್ಣು ಕೊಟ್ಟ ಅತ್ತೆ ಮಾವ ಮತ್ತು ತನ್ನ ಹೆಂಡತಿಯನ್ನೇ ಸಂಮಾನಿಸಿ ಮಹಿಳಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ‌.

    ಕಾರ್ಕಳದ ಕೃಷಿಕರೂ , ಜಿಲ್ಲಾ ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿಗಳೂ  ಆಗಿರುವ ಇರ್ವತ್ತೂರು ಶ್ರೀನಿವಾಸ ಭಟ್ಟರು ಹೀಗೊಂದು ಅರ್ಥಪೂರ್ಣ ಕಾರ್ಯಕ್ರಮ ನಡೆಸಿದ್ದಾರೆ . ಬುಧವಾರ ತನ್ನ ವೈವಾಹಿಕ ಜೀವನದ 25 ನೇ ವರ್ಷವೂ ಆಗಿದ್ದರಿಂದ ಇರ್ವತ್ತೂರಿನ  ಮನೆಯಲ್ಲಿ ಮನೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಭಟ್ಟರು ಅದೇ ಸಂದರ್ಭದಲ್ಲಿ ತನಗೆ ಜನ್ಮನೀಡಿ ಬಹಳ ಕಷ್ಟದಿಂದ ಸಾಕಿ ಬೆಳೆಸಿದ್ದು ಮಾತ್ರವಲ್ಲದೇ ಇಂದಿಗೂ ಕೃಷಿ ಕಾರ್ಯ ಮತ್ತು ಮನೆಯ ಎಲ್ಲ ಕೆಲಸ ಕಾರ್ಯಗಳಲ್ಲಿ ಸಕ್ರಿಯರಾಗಿ ನೆರವಾಗುತ್ತಿರುವ ಅಮ್ಮ ಪ್ರೇಮಾ ಭಟ್.

    ಕೃಷಿ ಎಂದರೆ ಮೂಗು ಮುರಿಯುವ ಮತ್ತು ಕೃಷಿಕ ಯುವಕರಿಗೆ ಹೆಣ್ಣುಕೊಡಲು ಹಿಂದು ಮುಂದು ನೋಡುವ ಕಾಲದಲ್ಲಿ ತನಗೆ ಅತ್ಯಂತ ಪ್ರೀತಿಯಿಂದಲೇ ಮಗಳನ್ನು ಕೊಟ್ಟು ಕನ್ಯಾದಾನ ಮಾಡಿದ ಅತ್ತೆ ಮಾವನವರಾದ ಶೃಂಗೇರಿ ಸಮೀಪದ ಅಡ್ಡಗದ್ದೆ ನಿವಾಸಿಗಳಾದ ರಾಮಕೃಷ್ಣಯ್ಯ ಸುನಂದಾ ದಂಪತಿ , ಮತ್ತು ತನ್ನನ್ನು ವರಿಸಿ, ಈ ತನಕದ 25 ವರ್ಷಗಳಲ್ಲಿ ತನ್ನೊಂದಿಗೆ ಅತ್ಯಂತ ಕಷ್ಟಕರವಾದ ಕೃಷಿಗೆ ಭರಪೂರ ನೆರವು , ಕ್ಯಾಟರಿಂಗ್ ಉದ್ಯಮಕ್ಕೆ ಸಹಕಾರ , ತನ್ನ ಸಾಮಾಜಿಕ ಚಟುವಟಿಕೆಗಳಿಗೆ ಪ್ರೋತ್ಸಾಹ , ಮಕ್ಕಳಿಗೆ ಉತ್ತಮ ಸಂಸ್ಕಾರ , ಹಳ್ಳಿ ಮನೆಯ ಬದುಕಿನ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಿ ಹುಟಿ್ಟಿದ ಮನೆ , ಕಾಲಿಟ್ಟ ಮನೆಯ ಕೀರ್ತಿ ಬೆಳಗುತ್ತಿರುವ ಪ್ರೀತಿಯ ಮಡದಿ ಸುಜಾತಾ ಭಟ್ ಅವರನ್ನು ನೂರಾರು ಬಂಧುಗಳ ಉಪಸ್ಥಿತಿಯಲ್ಲಿ ಸಂಮಾನಿಸಿ ಧನ್ಯತೆ ಅನುಭವಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply