FILM
ಸ್ವರ ಮಾಂತ್ರಿಕ ದಿಗ್ಗಜ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ
ಚೆನ್ನೈ ಸೆಪ್ಟೆಂಬರ್ 25: ಸಾವಿರಾರು ಹಾಡುಗಳ ಮೂಲಕ ಸಂಗೀತ ಪ್ರಿಯರ ಮನದಲ್ಲಿ ತಮ್ಮದೇ ಸ್ಥಾನ ಪಡೆದಿರುವ ಸ್ವರ ಮಾಂತ್ರಿಕ ಹಾಗೂ ದಿಗ್ಗಜ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಎಸ್ಪಿಬಿ ಅವರಿಗೆ ಆಗಸ್ಟ್ 5 ರಂದು ಕರೊನಾ ಸೋಂಕು ದೃಢವಾಗಿತ್ತು. ಅದೇ ದಿನ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎಸ್ಪಿಬಿ ಗುಣಮುಖರಾಗಿ ಬರಲೆಂದು ಚಿತ್ರರಂಗ ಸೇರಿದಂತೆ ಅನೇಕರು ಪ್ರಾರ್ಥಿಸಿದ್ದರು. ಅಲ್ಲದೆ ಆಗಸ್ಟ್ 28ರಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಅಲ್ಲದೆ, ಕರೊನಾ ನಗೆಟಿವ್ ಸಹ ಆಗಿತ್ತು. ಈ ಬಗ್ಗೆ ಎಸ್ಪಿಬಿ ಮಗ ಎಸ್.ಪಿ. ಚರಣ್ ಮಾಧ್ಯಮಗಳಿಗೆ ತಿಳಿಸಿದ್ದರು.
ಆದರೆ ಸೆಪ್ಟೆಂಬರ್ 24 ರಿಂದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದಾಗಿ ಚೆನ್ನೈನ ಎಂಜಿಎಂ ಆಸ್ಪತ್ರೆ ತಿಳಿಸಿತ್ತು. ಕಳೆದ 24 ಗಂಟೆಯಲ್ಲಿ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದ್ದು, ಗರಿಷ್ಠ ಲೈಫ್ ಸಪೋರ್ಟ್ ನೀಡಲಾಗಿದೆ. ಆಸ್ಪತ್ರೆಯ ತಜ್ಞರ ತಂಡ ಅವರ ಆರೋಗ್ಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಎಂಜಿಎಂ ಆಸ್ಪತ್ರೆ ತಿಳಿಸಿತ್ತು. ಇಂದು ಬೆಳಿಗ್ಗೆಯಿಂದಲೇ ಎಸ್ ಪಿಬಿ ಅವರ ಆರೋಗ್ಯ ಸ್ಥಿತಿ ಕ್ಷಿಣಿಸಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ತನ್ನ ಸಂಗೀತದಿಂದ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಎಸ್ ಪಿಬಿ ಅವರ ಅಗಲಿಕೆ ಭಾರಿ ನೋವನ್ನು ತಂದೊಡ್ಡಿದೆ.
ಎಸ್ ಪಿಬಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯಕ್ಕಾಗಿ ಇಡೀ ವಿಶ್ವದಲ್ಲಿ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದರು.