LATEST NEWS
ಕೆಲಸ ಮಾಡದ ಪೊಲೀಸ್ ಅಧಿಕಾರಿಗಳನ್ನು ಲಾಕಪ್ ಗೆ ತಳ್ಳಿದ ಎಸ್ಪಿ….!!

ಬಿಹಾರ ಸೆಪ್ಟೆಂಬರ್ 11: ಪೊಲೀಸ್ ಠಾಣೆಯಲ್ಲಿರುವ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸಿಲ್ಲ ಎಂದು ಎಸ್ಪಿ ಎಲ್ಲಾ ಪೊಲೀಸ್ ಸಿಬ್ಬಂದಿಗಳನ್ನು ಲಾಕಪ್ ಗೆ ಹಾಕಿದ ಘಟನೆ ಬಿಹಾರದ ನವಾಡದಲ್ಲಿ ನಡೆದಿದೆ.
ಸದ್ಯ ಈ ಘಟನೆಯ ವಿಡಿಯೋ ವೈರಲ್ ಆಗಿದೆ. ನವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಮಂಗ್ಲಾ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ಪ್ರಕರಣಗಳನ್ನು ಪರಿಶೀಲಿಸುವ ಸಲುವಾಗಿ ಸೆಪ್ಟೆಂಬರ್ 8ರಂದು ರಾತ್ರಿ 9 ಗಂಟೆ ಸುಮಾರಿಗೆ ಎಸ್ಪಿ ಗೌರವ್ ಮಂಗ್ಲಾ ಠಾಣೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕಿರಿಯ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿರುವುದು ಪತ್ತೆಯಾಗಿತ್ತು. ಇದರಿಂದ ಕೋಪಗೊಂಡಿದ್ದ ಗೌರವ್, ತಪ್ಪು ಮಾಡಿದವರನ್ನು ಲಾಕಪ್ನಲ್ಲಿ ಇರಿಸುವಂತೆ ಹೇಳಿದ್ದರು.

ಘಟನೆ ಸಂಬಂಧ ಗೌರವ್ ಮಂಗ್ಲಾ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಬಿಹಾರ ಪೊಲೀಸ್ ಒಕ್ಕೂಟ (ಬಿಪಿಎ) ಒತ್ತಾಯಿಸಿದೆ. ಸಬ್ ಇನ್ಸ್ಪೆಕ್ಟರ್ಗಳಾದ ಶತ್ರುಘ್ನ ಪಾಸ್ವಾನ್ ಮತ್ತು ರಾಮ್ರೇಖಾ ಸಿಂಗ್, ಎಎಸ್ಐಗಳಾದ ಸಂತೋಷ್ ಪಾಸ್ವಾನ್, ಸಂಜಯ್ ಸಿಂಗ್ ಮತ್ತು ರಾಮೇಶ್ವರ್ ಉರೌನ್ ಅವರು ಲಾಕಪ್ನಲ್ಲಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.