LATEST NEWS
ಕ್ಷಮಿಸು ಮಗಳೇ ಎಂದ ಕೇರಳ ಪೊಲೀಸರು….!!

ಕೇರಳ ಜುಲೈ 30: 5 ವರ್ಷ ಪ್ರಾಯದ ಪುಟ್ಟ ಬಾಲಕಿಯನ್ನು ಕಾಮುಕನೊಬ್ಬ ಅತ್ಯಾಚಾರಗೈದು ಕೊಲೆ ಮಾಡಿ ಕಸದ ರಾಶಿಗೆ ಬಿಸಾಕಿ ಅಮಾನುಷ ಘಟನೆ ನಡೆದಿದ್ದು, ಇದೀಗ ಈ 5 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆಗೆ ಪೊಲೀಸರು ಟ್ವೀಟ್ ಮಾಡಿ ಕ್ಷಮೆಯಾಚಿಸಿದ್ದಾರೆ.
ಬಿಹಾರ ಮೂಲದ ದಂಪತಿಗೆ ಸೇರಿದ್ದ 5 ವರ್ಷದ ಬಾಲಕಿಯನ್ನು ಬಿಹಾರ ಮೂಲದ ಕಾಮುಕನೊಬ್ಬ ಕಿಡ್ನಾಪ್ ಮಾಡಿ ಅತ್ಯಾಚಾರ ವೆಸಗಿ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಆಲುವಾದ ಸ್ಥಳೀಯ ಮಾರುಕಟ್ಟೆ ಬಳಿ ಎಸೆದು ಹೋಗಿದ್ದಾನೆ.ಬಾಲಕಿ ನಾಪತ್ತೆಯಾದ ಬಗ್ಗೆ ಹುಡುಕಾಟ ನಡೆಸಿದ ಪೊಲೀಸರಿಗೆ ತಡರಾತ್ರಿ ಶವ ಪತ್ತೆಯಾಗಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆರೋಪಿಯನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ಕುಟುಂಬ ವಾಸವಿದ್ದ ಕಟ್ಟಡದಲ್ಲೇ ಆರೋಪಿ ವಾಸವಾಗಿದ್ದ. ಪೊಲೀಸರ ಪ್ರಕಾರ, ಆರೋಪಿಗಳು ಕಟ್ಟಡದ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು.

ಈ ಘಟನೆಗೆ ಕೇರಳದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಸ್ವತಃ ಕೇರಳ ಪೊಲೀಸರೇ ‘ಕ್ಷಮಿಸಿ ಮಗಳೇ’ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಕೇರಳ ಪೊಲೀಸರು ಬಾಲಕಿಯ ಪೋಷಕರಿಗೆ ಕ್ಷಮೆಯಾಚನೆಯನ್ನೂ ಪೋಸ್ಟ್ ಮಾಡಿದ್ದಾರೆ. “ಮಗುವನ್ನು ಸುರಕ್ಷಿತವಾಗಿ ಪೋಷಕರ ಬಳಿಗೆ ಕರೆತರುವ ಪ್ರಯತ್ನ ವಿಫಲವಾಗಿದೆ” ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಮಗುವನ್ನು ಅಪಹರಿಸಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಪೋಸ್ಟ್ ಮೂಲಕ ತಿಳಿಸಿದ್ದಾರೆ.
ಆರೋಪಿ ಕುಡಿದ ಮತ್ತಿನಲ್ಲಿದ್ದ ಕಾರಣ ಪ್ರಾಥಮಿಕ ವಿಚಾರಣೆಯಲ್ಲಿ ಸಮಸ್ಯೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಶನಿವಾರ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯ ಪೊಲೀಸರನ್ನು ತೀವ್ರವಾಗಿ ಖಂಡಿಸಿದೆ. ಪೊಲೀಸರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಅದೇ ಸಮಯದಲ್ಲಿ, ಮಾದಕ ದ್ರವ್ಯ ಮತ್ತು ಮದ್ಯದ ಅತಿಯಾದ ಸೇವನೆಯಿಂದ ಈ ಅಪರಾಧ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.