LATEST NEWS
ವಿಡಿಯೋ ಕಾಲ್ ನಲ್ಲಿ ರೋಮ್ ನಲ್ಲಿರುವ ಮಗನ ಮುಖ ನೋಡಿ ಕೊನೆಯುಸಿರೆಳೆದ ತಾಯಿ…!!
ಮಂಗಳೂರು ನವೆಂಬರ್ 05: ತನ್ನ ಮಗನ ಮುಖ ನೋಡಲು ಜೀವ ಹಿಡಿದಿಟ್ಟುಕೊಂಡಿದ್ದ ತಾಯಿಯ ಕೊನೆ ಆಸೆಯನ್ನು ವೈದ್ಯರು ಈಡೇರಿಸಿದ್ದು, ಈ ಘಟನೆಯ ಬಗ್ಗೆ ಮಂಗಳೂರಿನ ಪ್ರಖ್ಯಾತ ವೈದ್ಯರಾದ ಡಾ. ಪದ್ಮನಾಭ ಕಾಮತ್ ಅವರು ಮನಮಿಡಿಯುವ ಟ್ವೀಟ್ ಮಾಡಿದ್ದಾರೆ.
ಮಂಗಳೂರಿನ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಮಹಿಳೆಯೊಬ್ಬರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದರೆ, ಅತ್ತ ಅವರ ಪುತ್ರ ರೋಮ್ ನಲ್ಲಿ ಕೆಲಸದಲ್ಲಿದ್ದಾರೆ. ಆದರೆ ಐಸಿಯು ನಲ್ಲಿ ತಾಯಿಯಿದ್ದರೂ ತನ್ನ ಮಗನ ಮುಖವನ್ನು ನೋಡಬೇಕೆಂಬ ಹಂಬಲ ವ್ಯಕ್ತಪಡಿಸುತ್ತಾರೆ. ಕೈ ಸನ್ನೆಗಳ ಮೂಲಕ ತನ್ನ ಪುತ್ರನಲ್ಲಿ ಮಾತನಾಡಿಸುವಂತೆ ಮನವಿ ಮಾಡುತ್ತಾರೆ.
ರೋಗಿಯ ಕೈ ಸನ್ನೆಗಳಿಂದ ಅರಿತ ವೈದ್ಯರು ಕೂಡಲೇ ರೋಮ್ ನಲ್ಲಿರುವ ಆಕೆಯ ಪುತ್ರನಿಗೆ ವಿಡಿಯೋ ಕಾಲ್ ಮಾಡುತ್ತಾರೆ. ಸಾಮಾನ್ಯವಾಗಿ ಐಸಿಯುನಲ್ಲಿ ಮೊಬೈಲ್ ಫೋನ್ ಬಳಸುವಂತಿಲ್ಲ. ಆದರೆ, ತಾಯಿಯ ಹಂಬಲಕ್ಕೆ ಕರಗಿದ ವೈದ್ಯರು ಐಸಿಯುನಿಂದ ವಿಡಿಯೋ ಕರೆ ಮಾಡುವುದನ್ನು ಅನುಮತಿಸಿದ್ದಾರೆ. ಆಕೆ ತನ್ನ ಪುತ್ರನನ್ನು 10 ನಿಮಿಷಗಳ ಕಾಲ ವಿಡಿಯೋ ಕರೆಯಲ್ಲಿ ನೋಡುತ್ತಾ ಅತ್ತಿದ್ದಾಳೆ. ತನ್ನ ಮಗನನ್ನು ನೋಡಿದ ಬಳಿಕ ಆಕೆ ಕೊನೆಯುಸಿರೆಳೆದಿದ್ದಾಳೆ.
ಈ ಕರುಣಾಜನಕ ಕಥೆಯನ್ನು ಡಾ. ಪದ್ಮನಾಭ ಕಾಮತ್ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. “ವೆಂಟಿಲೇಟರ್‌ನಲ್ಲಿರುವ ವಯಸ್ಸಾದ ಮಹಿಳೆ ರೋಮ್‌ನಲ್ಲಿರುವ ತನ್ನ ಕಿರಿಯ ಮಗನಿಗೆ ಮಾತನಾಡಲು ಸನ್ನೆಗಳನ್ನು ಮಾಡುತ್ತಾರೆ. ಐಸಿಯುನಿಂದ ವಿಡಿಯೋ ಕರೆಯನ್ನು ಅನುಮತಿಸಲಾಯ್ತು. ನಾನು ಸುಮಾರು ಒಂದು ದಶಕದ ಕಾಲ ಆಕೆಯ ಹೃದ್ರೋಗ ತಜ್ಞರಾಗಿದ್ದೇನೆ. ಆಕೆ ತನ್ನ ಮಗನನ್ನು ಹತ್ತು ನಿಮಿಷಗಳ ಕಾಲ ಕಣ್ಣೀರು ಸುರಿಸುತ್ತಾ ನೋಡಿದರು. ಬಳಿಕ ಕೊನೆಯುಸಿರೆಳೆದಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ. ಇದು ವಿಧಿಯಾಟವಾಗಿದ್ದು, ಯಾರನ್ನೂ ಇಲ್ಲಿ ದೂಷಿಸುವಂತಿಲ್ಲ. ಕುಟುಂಬಕ್ಕೆ ಸಹಾಯ ಮಾಡಲು ತಾನು ಮಾಡಬಹುದಾದ ಕನಿಷ್ಠ ಸಹಾಯ ಇದಾಗಿದೆ ಎಂದಿದ್ದಾರೆ.