LATEST NEWS
ನ್ಯಾಯಾಲಯಗಳ ತೀರ್ಪಿನ ವಿರುದ್ದ ಬೆದರಿಕೆಗಳನ್ನು ಹಾಕಲಾಗುತ್ತಿದೆ – ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್
ನ್ಯಾಯಾಲಯಗಳ ತೀರ್ಪಿನ ವಿರುದ್ದ ಬೆದರಿಕೆಗಳನ್ನು ಹಾಕಲಾಗುತ್ತಿದೆ – ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್
ಮಂಗಳೂರು ಡಿಸೆಂಬರ್ 1 : ದೇಶದಲ್ಲಿ ಈಗ ಆರ್ಥಿಕ ಮತ್ತು ಸಾಮಾಜಿಕ ಭಯೋತ್ಪಾದನೆ ಯುಗ ಆರಂಭವಾಗಿದ್ದು, ದೇಶದ ನ್ಯಾಯಾಂಗದ ಮೇಲೂ ಬಾಹ್ಯ ಒತ್ತಡ ಹೇರಲಾಗುತ್ತಿದೆ. ಇದೇ ರೀತಿಯ ತೀರ್ಪು ನೀಡಬೇಕು, ವಿರುದ್ಧವಾದ ತೀರ್ಪು ನೀಡಿದರೆ ಒಪ್ಪುವುದಿಲ್ಲ ಎಂಬ ಬೆದರಿಕೆಗಳನ್ನು ಹಾಕಲಾಗುತ್ತಿದೆ. ಅಯೋಧ್ಯೆಯ ಪ್ರಕರಣದಲ್ಲೂ ಹೀಗೆಯೇ ಮಾಡಲಾಗುತ್ತಿದೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಕಳವಳ ವ್ಯಕ್ತಪಡಿಸಿದರು.
ಅಭಿಮತ ಸಂಘಟನೆಯು ಮಂಗಳೂರಿನ ಶಾಂತಿ ಕಿರಣದಲ್ಲಿ ಆಯೋಜಿಸಿರುವ ಎರಡು ದಿನಗಳ ಜನನುಡಿ- 2018 ಅನ್ನು ಎಚ್.ಎನ್.ನಾಗಮೋಹನ ದಾಸ್ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ ಅವರು ಕೇಂದ್ರ ಸರಕಾರ ಬ್ಯಾಂಕ್ ಗಳ ಲೂಟಿಕೋರರ ಬೆಂಬಲಕ್ಕೆ ನಿಂತಿದ್ದು, ಸಂಪತ್ತಿನ ಶೇಖರಣೆಗೆ ಸರ್ಕಾರವೇ ಬೆಂಬಲ ನೀಡುತ್ತಿದೆ ಎಂದರು. ಹಿಂದೆ ಸಂವಿಧಾನೇತರ ಶಕ್ತಿಗಳು ಕ್ರೈಸ್ತರ, ಮುಸ್ಲಿಮರ, ದಲಿತರ ಮೇಲೆ ದಾಳಿ ಮಾಡಿದವು. ಆಗ ಜನರು ಸುಮ್ಮನಿದ್ದರು. ಆದರೆ ಈಗ ಸಂವಿಧಾನದ ಮೇಲೆ ಆ ಶಕ್ತಿಗಳು ದಾಳಿ ಮಾಡುತ್ತಿವೆ. ಇದರಿಂದ ಇಡೀ ದೇಶ ಬಿಕ್ಕಟ್ಟಿನಲ್ಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ಆಧಾರ ಸ್ತಂಭಗಳಂತೆ ಇರುವ ಸಂಸ್ಥೆಗಳನ್ನು ನಾಶ ಮಾಡುವ ಪ್ರಯತ್ನ ಆರಂಭವಾಗಿದೆ. ಭಿನ್ನ ಧ್ವನಿಗಳನ್ನು ಅಡಗಿಸಲು ಅಧಿಕಾರವನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದರು.
ಆರ್ಥಿಕ ಮತ್ತು ಸಾಮಾಜಿಕ ಭಯೋತ್ಪಾದನೆಗೆ ಕಡಿವಾಣ ಹಾಕದಿದ್ದರೆ ದೇಶ ಅರಾಜಕತೆಯತ್ತ ಸಾಗುವ ಸಂಭವವಿದೆ. ಆಗ ಇಡೀ ರಾಷ್ಟ್ರ ಮೂಲಭೂತವಾದಿಗಳು ಮತ್ತು ಕೋಮುವಾದಿಗಳ ಕೈಗೆ ಸಿಲುಕುತ್ತದೆ. ಇಂತಹ ಅಪಾಯ ಎದುರಾಗದಂತೆ ಜನರು ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು.