Connect with us

LATEST NEWS

ಸಾಮಾಜಿಕ ಜಾಲತಾಣದ ಅಪರಿಚಿತರ ಸ್ನೇಹ..6 ವರ್ಷದ ಮಗಳ ಎದುರೆ ಹೋಯಿತು ಪ್ರಾಣ

ಇಂದೋರ್ : ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರ ಸ್ನೇಹ ಎಷ್ಟು ದುಬಾರಿಯಾದೀತು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತನೊಂದಿಗೆ ಸ್ನೇಹಕ್ಕೆ ಮಹಿಳೆಯೊಬ್ಬರು ಇಹಲೋಕವನ್ನೇ ತ್ಯಜಿಸುವಂತಾದ ದುರಂತ ಇಂದೋರ್ ನಲ್ಲಿ ನಡೆದಿದೆ.


ಪ್ರಿಯಾ ಅಗರ್​ವಾಲ್​ ಎಂಬ 26 ವರ್ಷದ ಯುವತಿ, ತನ್ನ ಪತಿ ಶ್ಯಾಮ್​ ಅಗರ್​ವಾಲ್​ ಹಾಗೂ ಪುತ್ರಿಯ ಜತೆ ಇಂದೋರ್​ನ ಲಸೂದಿಯಾದಲ್ಲಿ ನೆಲೆಸಿದ್ದಳು. ಆದರೆ ಒಂದು ವರ್ಷದ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಸೌರಭ್ ಅಲಿಯಾಸ್ ಗೋಲು ಗೊಟ್ರೆ ಎಂಬಾತನೊಂದಿಗೆ ಪರಿಚಯವಾಗಿದ್ದು, ನಂತರ ಈ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಈ ಇಬ್ಬರು ಕಳೆದ ಒಂದು ವರ್ಷದಿಂದ ಚಾಟಿಂಗ್ ನಲ್ಲಿದ್ದರು ಎಂದು ಹೇಳಲಾಗಿದ್ದು, ಇತ್ತೀಚೆಗೆ ಇಬ್ಬರ ಸ್ನೇಹದ ನಡುವೆ ಬಿರುಕು ಬಂದಿದ್ದು ಮಾತುಕತೆ ನಿಂತ ಹೋಗಿತ್ತು. ಈ ಹಿನ್ನಲೆ ಪ್ರಿಯಾ ತನ್ನನ್ನು ಸರಿಯಾಗಿ ಮಾತಾಡಿಸುತ್ತಿಲ್ಲ ಎಂದು ಸೌರಭ್ ಕೋಪಗೊಂಡಿದ್ದ ಎನ್ನಲಾಗಿದೆ.


ಗುರುವಾರ ಸಂಜೆ 7 ಗಂಟೆಯ ವೇಳೆಗೆ ಪಟ್ಟಣದ ಗ್ಯಾನಶೀಲ ಸೂಪರ್ ಸಿಟಿ ಬಳಿ ಖಾಲಿ ಜಾಗವೊಂದಕ್ಕೆ ಅವಳನ್ನು ಮಾತನಾಡಲು ಕರೆಸಿಕೊಂಡಿದ್ದಾನೆ. ಅಲ್ಲಿಗೆ ತನ್ನ ಮಗಳೊಂದಿಗೆ ಬಂದ ಪ್ರಿಯಾ ಜೊತೆ ಜಗಳ ಮಾಡಿ ಅವಳನ್ನು ಕತ್ತರಿಯಿಂದ ಮತ್ತೆ ಮತ್ತೆ ಚುಚ್ಚಿ ತೀವ್ರವಾಗಿ ಗಾಯಗೊಳಿಸಿದ್ದಾನೆ. ಮುಖ ಮತ್ತು ಕತ್ತಿನಿಂದ ರಕ್ತ ಹರಿಯುತ್ತಿದ್ದ ಪ್ರಿಯಾ ಹತ್ತಿರದ ಅಂಗಡಿಗಳ ಬಳಿಗೆ ನಡೆದು ಬಂದು ಕುಸಿಯುವುದು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಿಯಾ ತನ್ನ ಮಗಳ ಮುಂದೆ ಉಸಿರಾಡಲು ಕಷ್ಟ ಪಡುತ್ತಿರುವಾಗ ಸೌರಭ್ ಆರಾಮವಾಗಿ ತನ್ನ ಸ್ಕೂಟರ್ ಹತ್ತಿ ಹೋಗಿದ್ದಾನೆ.

ನೆರೆದ ಜನರು ಪ್ರಿಯಾಳನ್ನು ಆಸ್ಪತ್ರೆಗೆ ಸೇರಿಸಿದರಾದರೂ ಆಕೆ ಸಾವಿಗೀಡಾಗಿದಳು. ವಿಷಯ ತಿಳಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದು, ಕುಡಿದ ಅಮಲಿನಲ್ಲಿದ್ದ ಸೌರಭ್ ತಪ್ಪೊಪ್ಪಿಕೊಂಡಿದ್ದಾನೆ. ಪ್ರಿಯಾಳ ಪತಿ ಶ್ಯಾಂ ಅಗರ್ವಾಲ್ ಅವರಿಬ್ಬರ ಸ್ನೇಹದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಇದು ಬರೀ ಸ್ನೇಹನಾ ಅಥವಾ ಪ್ರೀತಿಯಾ ಎಂಬಿತ್ಯಾದಿ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement
Click to comment

You must be logged in to post a comment Login

Leave a Reply