LATEST NEWS
ಪ್ರಕಾಶ್ ರೈಗೆ ಕಾರಂತ ಪ್ರಶಸ್ತಿ ವಿರೋಧ ಸರಿಯಲ್ಲ – ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಹಂದೆ
ಪ್ರಕಾಶ್ ರೈಗೆ ಕಾರಂತ ಪ್ರಶಸ್ತಿ ವಿರೋಧ ಸರಿಯಲ್ಲ – ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಹಂದೆ
ಉಡುಪಿ ಅಕ್ಟೋಬರ್ 5: ಸಾಮಾಜಿಕ ಜಾಲತಾಣಗಳಲ್ಲಿ ನಟ ಪ್ರಕಾಶ್ ರೈಗೆ ಕಾರಂತ ಹುಟ್ಟೂರ ಪ್ರಶಸ್ತಿ ನೀಡಿಕೆ ವಿಚಾರದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಸ್ಪಷ್ಠೀಕರಣ ನೀಡಿದ ಉಡುಪಿ ತಾಲೂಕಿನ ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಹಂದೆ, ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ರೈ ಆಯ್ಕೆಯ ಬಗ್ಗೆ ವಿರೋಧ ಸರಿಯಲ್ಲ ಎಂದು ಹೇಳಿದರು. ಪ್ರಕಾಶ್ ರೈ ಪ್ರಶಸ್ತಿ ಸ್ವೀಕರಿಸಲು ಬರುತ್ತಾರೆ ಎಂದು ಹೇಳಿದರು.
ಇದು ಕೋಟತಟ್ಟು ಗ್ರಾ.ಪಂ. ಮತ್ತು ಶಿವರಾಮ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಶಿವರಾಮ ಕಾರಂತ ಟ್ರಸ್ಟ್ ಕೊಡುವ ಪ್ರಶಸ್ತಿ ಇದಾಗಿದ್ದು, ಕಳೆದ 13 ವರ್ಷಗಳಿಂದ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಬಾರಿ ನಟ ಬಹುಭಾಷಾ ನಟ ಪ್ರಕಾಶ್ ರೈಯನ್ನು ಆಯ್ಕೆ ಮಾಡಲಾಗಿದೆ. ಪ್ರಕಾಶ್ ರೈ ಈ ಪ್ರಶಸ್ತಿಗೆ ನಿಜವಾಗಿಯೂ ಅರ್ಹರು. ಅವರ ವೈಯುಕ್ತಿಕ ಹೇಳಿಕೆಗೂ ಈ ಪ್ರಶಸ್ತಿಗೂ ಸಂಬಂಧವಿಲ್ಲ ಎಂದು ಹೇಳಿದ ಅವರು ಅಕ್ಟೋಬರ್ 10ನೇ ತಾರೀಖಿನಂದು ಸಂಜೆ ಆರು ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮ ನಿಗದಿಯಂತೆ ನಡೆಯಲಿದ್ದು ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ ಅವರು ಪ್ರಶಸ್ತಿ ಆಯ್ಕೆ ಮಾಡುವ ಸಂದರ್ಭದಲ್ಲಿ ಐದು ಮಂದಿ ಆಯ್ಕೆ ಮಂಡಳಿ ನೇಮಕ ಮಾಡಲಾಗಿತ್ತು. ಈ ಆಯ್ಕೆ ಮಂಡಳಿ ಬಹುಭಾಷಾ ನಟ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಿದೆ. ಈ ಪ್ರಶಸ್ತಿಯನ್ನು ಕಳೆದ 12 ವರ್ಷಗಳಲ್ಲಿ ಸಾಧಕರಿಗೆ ಪ್ರತಿವರ್ಷ ನೀಡುತ್ತಾ ಬಂದಿದ್ದೆವೆ. ಪ್ರಶಸ್ತಿಗೆ ವಿರೋಧ ವ್ಯಕ್ತಪಡಿಸಿ ಕಡಲ ತಡಿಯ ಭಾರ್ಗವ ಕಾರಂತರ ಹೆಸರಿಗೆ ಚ್ಯುತಿ ಬರಬಾರದು, ಈ ಹಿನ್ನಲೆಯಲ್ಲಿ ಪ್ರಶಸ್ತಿ ನೀಡಿಕೆ ವಿಚಾರದಲ್ಲಿ ರಾಜಕೀಯ ಬೇಡ ಎಂದು ಮನವಿ ಮಾಡಿದರು.
ರೈ ಆಯ್ಕೆಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ
ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ದ ಹೇಳಿಕೆ ಹಾಗೂ ಕಾವೇರಿ ನದಿ ವಿಚಾರದಲ್ಲಿ ತಮಿಳ್ನಾಡು ಪರ ಬ್ಯಾಟ್ ಬೀಸಿದ್ದ ಪ್ರಕಾಶ್ ರೈ ವಿರುದ್ದ ಭಾರಿ ಟೀಕೆ ವ್ಯಕ್ತವಾಗಿತ್ತು. ಕಾರಂತ ಹುಟ್ಟೂರು ಪ್ರಶಸ್ತಿಗೆ ಆಯ್ಕೆಯಾಗಿದ್ದ ಪ್ರಕಾಶ್ ರೈ ವಿರುದ್ದ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು ಯಾವುದೇ ಕಾರಣಕ್ಕೂ ಪ್ರಕಾಶ್ ರೈ ಅವರಿಗೆ ಪ್ರಶಸ್ತಿ ನೀಡಬಾರದೆಂದು ಆಗ್ರಹಿಸಲಾಗಿದೆ.