LATEST NEWS
ಬಾವಿಗೆ ಬಿದ್ದ ಭಾರಿ ಗಾತ್ರದ ನಾಗರಹಾವಿನ ರಕ್ಷಣೆ….!!
ಉಡುಪಿ ಮೇ 30: ಬಾವಿಯಲ್ಲಿ ಬಿದ್ದಿದ್ದ ಭಾರೀ ಗಾತ್ರದ ನಾಗರಹಾವೊಂದನ್ನು ರಕ್ಷಣೆ ಮಾಡಿರುವ ಘಟನೆ ಉಡುಪಿಯ ಕುಕ್ಕೆಹಳ್ಳಿ ಸಮೀಪ ನಡೆದಿದೆ.
ಉಡುಪಿಯ ಕುಕ್ಕೆಹಳ್ಳಿ ಸಮೀಪದ ಕೊರ್ಗು ನಾಯ್ಕ್ ರವರ ಬಾವಿಗೆ ಬೃಹತ್ ಗಾತ್ರದ ನಾಗರಹಾವು ಬಿದ್ದಿತ್ತು. ಬಾವಿಯಿಂದ ಮೇಲೆ ಬರಲಾಗದೇ ಹಾವು ಒದ್ದಾಡುತ್ತಿದ್ದನ್ನು ನೋಡಿ ಸ್ಥಳೀಯರು ಸಾಲಿಗ್ರಾಮದ ಉರಗ ತಜ್ಞ ಸುಧೀಂದ್ರ ಐತಾಳರಿಗೆ ಮಾಹಿತಿ ನೀಡಿದ್ದಾರೆ.
ಆದರೆ ಕರಾವಳಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬಾವಿಗೆ ಇಳಿದು ರಕ್ಷಣೆ ಕಾರ್ಯ ಕಠಿಣವಾಗಿತ್ತು, ಅಲ್ಲದೆ ನಾಗರಹಾವಿನ ಗಾತ್ರಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದರು. ಈ ಹಿನ್ನಲೆ ಸ್ಥಳಕ್ಕೆ ಆಗಮಿಸಿದ ಸುಧೀಂದ್ರ ಐತಾಳ್ ಅವರು ಉಪಾಯಹೂಡಿ ಟಯರ್ ವೊಂದನ್ನು ಎರಡು ಹಗ್ಗದ ಸಹಾಯದಿಂದ ಬಾವಿಗೆ ಇಳಿಸಲಾಯ್ತು. ಟಯರ್ ಮೂಲಕ ಹಾವನ್ನು ಮೇಲಕ್ಕೆತ್ತಿ, ನಂತರ ನಾಜೂಕಾಗಿ ಪೈಪ್ ನೊಳಗೆ ಬರುವಂತೆ ಮಾಡಿ ಸುರಕ್ಷಿತವಾಗಿ ರಕ್ಷಿಸಲಾಯ್ತು. ಮೇಲಕ್ಕೆ ಬರುವ ತನಕವೂ ಬುಸುಗುಟ್ಟುತ್ತಲೇ ಇದ್ದ ಹಾವು, ನಂತರ ಪೈಪಿನೊಳಗೆ ಕುಳಿದು ಕಾಡು ಸೇರಿದೆ. ಸುರಿವ ಮಳೆಯನ್ನು ಲೆಕ್ಕಿಸದೇ ಬುಸುಗುಟ್ಟುತ್ತಿದ್ದ ಹಾವಿನ ರಕ್ಷಣೆ ಮಾಡಿದ ಸಾಲಿಗ್ರಾಮ ಉರಗ ತಜ್ಞ ಸುಧೀಂದ್ರ ಐತಾಳ್ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. .