KARNATAKA
ಸಾವಿಗೆ ಬಂದವರಿಗೆ ತಿಂಡಿ – ನಗುಮೊಗದ ಪ್ರಚಾರದ ಫ್ಲೆಕ್ಸ್!

ಬೆಂಗಳೂರು, ಮೇ 04: ಬೆಂಗಳೂರು ನಗರದ ಹೊರವಲಯದಲ್ಲಿ ಕೋವಿಡ್ ಶವಗಳ ಸಾಮೂಹಿಕ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿ ಬರುವವರಿಗೆ ಕಾಫಿ, ತಿಂಡಿಯ ವ್ಯವಸ್ಥೆ ಮಾಡಿದ್ದನ್ನು ಪ್ರಚಾರಕ್ಕೆ ಬಳಸಿಕೊಂಡ ಬಿಜೆಪಿ ನಾಯಕರ ವಿರುದ್ಧ ಸೋಮವಾರ ವ್ಯಾಪಕ ಟೀಕೆ ವ್ಯಕ್ತವಾಯಿತು.
ಈ ಕುರಿತು ಗಿಡ್ಡೇನಹಳ್ಳಿ ಬಳಿ ಹಾಕಲಾಗಿದ್ದ ಫ್ಲೆಕ್ಸ್‌ನಲ್ಲಿ ‘ಕೋವಿಡ್‌ನಿಂದ ಸಾವಿಗೀಡಾದವರವನ್ನು ‘ಸಕಲ ಸರ್ಕಾರಿ ಮರ್ಯಾದೆಯೊಂದಿಗೆ’ ಅಂತ್ಯಸಂಸ್ಕಾರ ಮಾಡಲು ಜಿಲ್ಲಾಡಳಿತ ವತಿಯಿಂದ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ಕೆ ಬಂದವರಿಗೆ ಉಚಿತವಾಗಿ ನೀರು, ಕಾಫಿ, ಟೀ, ತಿಂಡಿ ವ್ಯವಸ್ಥೆ ಮಾಡಲಾಗಿದೆ’ ಎಂದು ಫ್ಲೆಕ್ಸ್‌ನಲ್ಲಿ ಬರೆಯಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಆರ್. ಅಶೋಕ, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರ ನಗುಮೊಗದ ಭಾವಚಿತ್ರವನ್ನು ಹಾಕಲಾಗಿದೆ.

ಈ ಫ್ಲೆಕ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸಾರ್ವಜನಿಕರು ವ್ಯಾಪಕ ಟೀಕೆ ಮಾಡಿದರು. ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ಸಾವಿನ ಸಂದರ್ಭದಲ್ಲಿಯೂ ಇಂತಹ ಪ್ರಚಾರ ಬೇಕಾ? ಹಾಸಿಗೆ ನೀಡದೆ ಜನರನ್ನು ಸಾಯಿಸುವ ಯೋಜನೆಗೆ ಪ್ರಚಾರ ಬೇರೆ ಕೇಡು’ ಎಂದು ಹಲವು ಆಕ್ರೋಶ ವ್ಯಕ್ತಪಡಿಸಿದರು.
‘ಉಚಿತ ಚಿಕಿತ್ಸೆ ಕೊಟ್ಟು ಜನರನ್ನು ಕಾಪಾಡಿ ಅಂದ್ರೆ, ಬಡ್ಡಿ ಮಕ್ಳು ಸರಿಯಾದ ವ್ಯವಸ್ಥೆ ಮಾಡದೆ ಜನರನ್ನು ಸಾಯಿಸೋಕೆ ಬಿಟ್ಟು ಉಚಿತ ಅಂತ್ಯಸಂಸ್ಕಾರವಂತೆ, ಬಂದವರಿಗೆಲ್ಲ ಫ್ರೀ ಟೀ ಕಾಫಿ ಬೇರೆ ಕೊಡ್ತಾರಂತೆ, ನಾಚಿಕೆ ಆಗಲ್ವ ನಿಮ್ಮ ಜನ್ಮಕ್ಕೆ’ ಎಂದು ಮೋಹನ್ ಗೌಡ ಎಂಬುವರು ಅಸಮಾಧಾನ ವ್ಯಕ್ತಪಡಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಈ ಫ್ಲೆಕ್ಸ್ ಅನ್ನು ತೆರವುಗೊಳಿಸಲಾಯಿತು.