BANTWAL
ಅಮೆಗತಿಯಲ್ಲಿ ಸಾಗುತ್ತಿರುವ ಬಿ.ಸಿ.ರೋಡ್- ಅಡ್ಡಹೊಳೆ ಹೆದ್ದಾರಿ ಕಾಮಗಾರಿ, ಸ್ವತಃ ಫೀಳ್ಡಿಗಿಳಿದು ಪರಿಶೀಲಿಸಿದ ದ.ಕ. ಜಿಲ್ಲಾಧಿಕಾರಿ..!

ಮಂಗಳೂರು : ಬಂಟ್ವಾಳ ಬಿ.ಸಿ.ರೋಡ್ ನಿಂದ ಶಿರಾಡಿ ಅಡ್ಡಹೊಳೆವರೆಗೆ ಆಮೆಗತಿಯಲ್ಲಿ ನಡೆಯುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಕೋಡಲು ಖುದ್ದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಬುಧವಾರ ಫೀಳ್ಡಿಗಿಳಿದಿದ್ದಾರೆ.
ಬಿ.ಸಿ.ರೋಡ್ ನಿಂದ ಗುಂಡ್ಯದವರೆಗೆ ನಡೆಯುತ್ತಿರುವ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು. ಈ ಸಂದರ್ಭ ಸಾರ್ವಜನಿಕರು ಕಾಮಾಗಾರಿಯಿಂದ ಆಗುತ್ತಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಜಿಲ್ಲಾಧಿಕಾರಿಗೆ ವಿವರಿಸಿದರು. ಬಿ.ಸಿ.ರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತದಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ವೀಕ್ಷಣೆ ನಡೆಸಿದ ಬಳಿಕ ಮೆಲ್ಕಾರ್, ಕಲ್ಲಡ್ಕ, ಮಾಣಿ ಮತ್ತು ಉಪ್ಪಿನಂಗಡಿ ಭಾಗದತ್ತ ತೆರಳಿ, ಅಲ್ಲೂ ಅಭಿವೃದ್ದಿ ಕಾರ್ಯಗಳನ್ನು ವೀಕ್ಷಣೆ ಮಾಡಿದರು. ಮೆಲ್ಕಾರ್ ನಲ್ಲಿ ಗುಡ್ಡವನ್ನು ಅಗೆದ ಪರಿಣಾಮವಾಗಿ ಕೆಲವೊಂದು ಮನೆಗಳಿಗೆ ಹಾನಿಯಾಗುವ ಸಂಭವ ಇದ್ದು ಮತ್ತು ಕೆಲವು ಮನೆಗಳಿಗೆ ಸಂಪರ್ಕ ರಸ್ತೆ ಕಡಿತಗೊಂಡ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತವಾದ ಬದಲಿ ವ್ಯವಸ್ಥೆ ಮಾಡಿಕೊಡುವ ಬಗ್ಗೆ ಚಿಂತನೆ ನಡೆಸುವ ಕುರಿತು ವಿಷಯ ಪ್ರಸ್ತಾಪ ಮಾಡಲಾಯಿತು. ಈ ಸಂದರ್ಭ, ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಕಲ್ಲಡ್ಕದಲ್ಲಿ ರಸ್ತೆ ಕಾಮಗಾರಿಯ ವೇಳೆ ದೂಳಿನ ಸಮಸ್ಯೆ ಉಂಟಾಗುತ್ತಿದ್ದು,ಸರಿಯಾಗಿ ನೀರು ಹಾಕುತ್ತಿಲ್ಲ ಎಂಬ ದೂರನ್ನು ಸಾರ್ವಜನಿಕರು ಗಮನ ಸೆಳೆದರು. ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು ಇನ್ನು ಮುಂದೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ದೂರುಗಳು ಬರದ ರೀತಿಯಲ್ಲಿ ಸ್ಥಳೀಯ ಗ್ರಾ.ಪಂ. ರಸ್ತೆ ನೀರು ಹಾಕುವ ಜವಾಬ್ದಾರಿ ವಹಿಸಬೇಕು ಎಂದು ತಹಸೀಲ್ದಾರ್ ಅವರಿಗೆ ತಿಳಿಸಿದರು. ಧೂಳಿನ ಸಮಸ್ಯೆಯಿಂದಾಗಿ ಕಲ್ಲಡ್ಕ ಪರಿಸರದಲ್ಲಿ ಆರೋಗ್ಯ ಸಮಸ್ಯೆ ಉದ್ಭವಿಸಿರುವ ಕುರಿತು ಸಾರ್ವಜನಿಕರು ಗಮನಕ್ಕೆ ತಂದರು. ಕೆಲವು ಕಡೆಗಳಲ್ಲಿ ರಸ್ತೆ ಕಾಮಗಾರಿ ವೇಳೆ ಕುಡಿಯುವ ನೀರಿನಪೈಪ್ ಗಳನ್ನು ತುಂಡರಿಸಲಾಗಿದ್ದು ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ , ಅಂತಹ ಕಡೆಗಳಲ್ಲಿ ಹೊಸ ಪೈಪ್ ಲೈನ್ ಅಳವಡಿಸಲು ಡಿಸಿ ಅಧಿಕಾರಿಗಳಿಗೆ ಸೂಚಿಸಿದ್ರು. ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್, ನಗರ ಪೋಲೀಸ್ ಠಾಣಾ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ, ಟ್ರಾಫಿಕ್ ಎಸ್.ಐ.ಸಂಜೀವ, ಹೆದ್ದಾರಿ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
