FILM
ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಅಕ್ಷಯ್ ಕುಮಾರ್ ಹೆಸರು.. ಯ್ಯೂಟ್ಯೂಬರ್ ಮೇಲೆ ಬಿತ್ತು 500 ಕೋಟಿ ಮಾನನಷ್ಟ ಮೊಕದ್ದಮೆ
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಹೆಸರನ್ನು ಎಳೆದು ತಂದ ಯುಟ್ಯೂಬರ್ ರಶೀದ್ ಸಿದ್ದೀಖಿ ವಿರುದ್ದ 500 ಕೋಟಿ ಮಾನನಷ್ಟ ಮೊಕದ್ದಮೆಯನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ದಾಖಲಿಸಿದ್ದಾರೆ.
ಯುಟ್ಯೂಬರ್ ರಶಿದ್ ಸಿದ್ದಿಖಿ ತಮ್ಮ FFnews ಎಂಬ ಯ್ಯೂಟ್ಯೂಬ್ ಚಾನೆಲ್ ನಲ್ಲಿ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ಸುದ್ದಿಗಳನ್ನು ಅಪ್ಲೋಡ್ ಮಾಡಿದ್ದರು. ಈ ಸುದ್ದಿಗಳಲ್ಲಿ ರಶೀದ್ ತಮ್ಮ ವೀಡಿಯೋದಲ್ಲಿ ಅಕ್ಷಯ್ ಅವರ ಹೆಸರನ್ನು ಹಲವು ಬಾರಿ ಉಲ್ಲೇಖಿಸಿದ್ದರಲ್ಲದೆ ವಿವಿಧ ಆರೋಪಗಳನ್ನೂ ಹೊರಿಸಿದ್ದರು. ಸುಶಾಂತ್‍ಗೆ ‘ಎಂ ಎಸ್ ಧೋನಿ: ದಿ ಅನ್‍ಟೋಲ್ಡ್ ಸ್ಟೋರಿ’ಯಂತಹ ಪ್ರಮುಖ ಚಿತ್ರಗಳು ದೊರಕುತ್ತಿದ್ದುದರಿಂದ ಅಕ್ಷಯ್ ನಿರಾಸೆಗೊಂಡಿದ್ದರು ಎಂದು ಸಿದ್ದೀಖಿ ಆರೋಪಿಸಿದ್ದರಲ್ಲದೆ ಅಕ್ಷಯ್ ಅವರು ಆದಿತ್ಯ ಠಾಕ್ರೆ ಮತ್ತು ಮುಂಬೈ ಪೊಲೀಸರ ಜತೆ ರಹಸ್ಯ ಸಭೆಗಳನ್ನೂ ನಡೆಸಿದ್ದರೆಂದು ಆಪಾದಿಸಿದ್ದರು.
ಬಿಹಾರ ಮೂಲದ ಸಿವಿಲ್ ಇಂಜಿನಿಯರ್ ಆಗಿರುವ ಸಿದ್ದೀಖಿ, ತನ್ನ ಒಂದು ವೀಡಿಯೋದಲ್ಲಿ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಗೂ ಅಕ್ಷಯ್‍ಗೂ ನಂಟು ಕಲ್ಪಿಸಿದ್ದರಲ್ಲದೆ ರಿಯಾಗೆ ಕೆನಡಾಗೆ ಪರಾರಿಯಾಗಲು ಸಹಾಯ ಮಾಡಿದ್ದರೆಂದು ಹೇಳಿಕೊಂಡಿದ್ದರು. ಅಲ್ಲದೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತವರ ಪುತ್ರ ಹಾಗೂ ಸಚಿವ ಆದಿತ್ಯ ಠಾಕ್ರೆ ಹೆಸರನ್ನೂ ಈ ಪ್ರಕರಣದಲ್ಲಿ ಎಳೆದು ತಂದಿದ್ದಕ್ಕಾಗಿ ಈ ಹಿಂದೆ ಸಿದ್ದೀಖಿಯನ್ನು ಪೊಲೀಸರು ಬಂಧಿಸಿದ್ದರು. ಈಗ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ನಕಲಿ ಸುದ್ದಿ ಹರಡುವಾಗ ತಮ್ಮ ಹೆಸರನ್ನು ಎಳೆದು ತಂದ ಯುಟ್ಯೂಬರ್ ರಶೀದ್ ಸಿದ್ದೀಖಿ ವಿರುದ್ಧ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ರೂ. 500 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಬರೀ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ರಿಶೀದ್ ಸಿದ್ದಿಖಿ ಸುಮಾರು 4 ತಿಂಗಳಲ್ಲಿ 15 ಲಕ್ಷಕ್ಕೂ ಅಧಿಕ ಹಣವನ್ನು ಯುಟ್ಯೂಬ್ ಮೂಲಕ ಸಂಪಾದನೆ ಮಾಡಿದ್ದರು ಎಂದು ಹೇಳಲಾಗಿದೆ.