KARNATAKA
ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಮಾರಾ ಮಾರಿ…!
ಶಿವಮೊಗ್ಗ, ಅಕ್ಟೋಬರ್ 16: ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಶುಕ್ರವಾರ ಮಧ್ಯಾಹ್ನ ಎರಡು ಬಣಗಳ ನಡುವೆ ಮಾರಾ ಮಾರಿ ನಡೆದಿದ್ದು, ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ.
ದೇವಸ್ಥಾನ ಆಡಳಿತ ಮಂಡಳಿ ಗಳ ಜಗಳ ಸ್ಫೋಟಗೊಂಡಿದೆ, ಸಿಗಂದೂರು ಧರ್ಮದರ್ಶಿ ರಾಮಪ್ಪ ಬೆಂಬಲಿಗರ ಮೇಲೆ ಪ್ರಧಾನ ಅರ್ಚಕ ಶೇಷಗಿರಿ ಭಟ್ಟ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ದೇವಾಲಯಕ್ಕೆ ಪೂಜೆ ಮಾಡಲು ಬಂದಿದ್ದ ಭಕ್ತರ ಮೇಲೆ ಹಲ್ಲೆ ಯಾಗಿದೆ. ದೇವಾಲಯದ ಆಡಳಿತ ಕಚೇರಿಯ ಗ್ಲಾಸ್ಗಳು, ಪೀಠೋಪಕರಣ ಧ್ವಂಸ ಮಾಡಿದ್ದಾರೆ.
ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಪೊಲೀಸರು, ಹತೋಟಿಗೆ ತಂದಿದ್ದರು. ಪೊಲೀಸರ ಎದುರಲ್ಲೇ ಎರಡು ಬಣಗಳ ನಡುವೆ ಮಾತಿನ ಚಕಮಕಿ ಜೋರಾಗಿತ್ತು. ದೇವಾಲಯ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ನವರಾತ್ರಿ ಚಂಡಿಕಾ ಹೋಮ ನಡೆಸಲು ಧರ್ಮದರ್ಶಿ ಮಂಡಳಿ ಅಡ್ಡಿ ಪಡಿ ಮುಟ್ಟಿದೆ ಎಂದು ಸಿಗಂದೂರು ದೇವಸ್ಥಾನದ ಪ್ರಧಾನ ಅರ್ಚಕ ಶೇಷಗಿರಿ ಭಟ್ ಕುಟುಂಬಸ್ಥರೊಂದಿಗೆ ಶುಕ್ರವಾರ ಬೆಳಗ್ಗೆ ಚೌಡೇಶ್ವರಿ ದೇವಿ ಎದುರು ಮೌನ ಪ್ರತಿಭಟನೆ ನಡೆಸುತ್ತಿದ್ದರು.
ಈ ವೇಳೆ ಧರ್ಮದರ್ಶಿ ರಾಮಪ್ಪ ಕಡೆಯ ಮಂಜಯ್ಯ ಜೈನ್ ಎಂಬುವವರು ದೇವರ ದರ್ಶನ ಪಡೆಯಲೆಂದು ಬಂದಿದ್ದರು. ಆಗ ಶೇಷಗಿರಿ ಭಟ್ ಕುಟುಂಬಸ್ಥರು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ಇತರರ ಮೇಲೆ ಕೈ ಮಾಡಿದ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.