LATEST NEWS
ಪ್ರಕಾಶ್ ರೈಗೆ ಕಾರಂತ ಪ್ರಶಸ್ತಿ ಸಂಸದೆ ಶೋಭಾ ಕರಂದ್ಲಾಜೆ ಗರಂ

ಪ್ರಕಾಶ್ ರೈಗೆ ಕಾರಂತ ಪ್ರಶಸ್ತಿ ಸಂಸದೆ ಶೋಭಾ ಕರಂದ್ಲಾಜೆ ಗರಂ
ಉಡುಪಿ ಅಕ್ಟೋಬರ್ 9: ನಟ ಪ್ರಕಾಶ್ ರೈ ಗೆ ಕಾರಂತ ಹುಟ್ಟೂರ ಪ್ರಶಸ್ತಿ ನೀಡುವ ಕೋಟತಟ್ಟು ಗ್ರಾಮಪಂಚಾಯತ್ ಹಾಗೂ ಕಾರಂತ ಹುಟ್ಟೂರ ಪ್ರಶಸ್ತಿ ಸಮಿತಿಗಳ ನಿರ್ಧಾರಕ್ಕೆ ಸಂಸದೆ ಶೋಭಾ ಕರಂದ್ಲಾಜೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಪ್ರಕಾಶ ರೈ ದೇಶದ ಜನತೆ ಬಹುಮತದಿಂದ ಆರಿಸಿರುವ ನಾಯಕರನ್ನು ಅಣಕಿಸಿದ್ದಾರೆ. ಮೇಲಾಗಿ ತನಗೆ ಈವರೆಗೆ ಲಭಿಸಿರುವ ಪ್ರಶಸ್ತಿಗಳೆಲ್ಲವನ್ನೂ, ದೇಶದಲ್ಲಿನ ಅಸಹಿಷ್ಣುತೆಗಾಗಿ ಹಿಂದಿರುಗಿಸಲು ಮುಂದಾಗಿರುವ ನಟ ಪ್ರಕಾಶ್ ರೈ ಯವರಿಗೆ ಇನ್ನೂ ಪ್ರಶಸ್ತಿಗಳನ್ನು ಕೊಡಮಾಡುವುದು ಅವರ ಅಸಹಿಷ್ಣುತೆ ಸಿದ್ದಾಂತವನ್ನು ಬೆಂಬಲಿಸಿದಂತೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ತಾನು ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿರುವ ಶೋಭಾ ಕರಂದ್ಲಾಜೆ, ಪ್ರಶಸ್ತಿ ಸಮಿತಿ ಹಾಗೂ ಕೋಟತಟ್ಟು ಗ್ರಾಮಪಂಚಾಯತ್, ಪ್ರಕಾಶ್ ರೈಗೆ ಕಾರಂತ ರಂತಹ ಉನ್ನತ ವ್ಯಕ್ತಿತ್ವದ ಮಹಾನುಭಾವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ನಿರ್ಧಾರವನ್ನು ಪುನರ್ ವಿಮರ್ಶಿಸಬೇಕು ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮುಂದೂಡಬೇಕು ಎಂದು ಆಗ್ರಹಿಸಿದ್ದಾರೆ.