Connect with us

    LATEST NEWS

    ಸಮಗ್ರ ಸಮೀಕ್ಷೆಯ ಮೂಲಕ ಎಲ್ಲಾ ವಿಕಲಚೇತನರಿಗೆ ಸೌಲಭ್ಯ ಮಂಜೂರು : ಶೋಭಾ ಕರಂದ್ಲಾಜೆ

    ಉಡುಪಿ, ಸೆಪ್ಟಂಬರ್ 24 : ಉಡುಪಿ ಜಿಲ್ಲೆಯಲ್ಲಿರುವ ವಿಕಲಚೇತನರು ಮತ್ತು ಹಿರಿಯ ನಾಗರೀಕರ ಕುರಿತಂತೆ ವ್ಯವಸ್ಥಿತವಾಗಿ ಸಮಗ್ರ ನಡೆಸಿ, ಅವರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಾಧನ ಸಲಕರಣಗಳನ್ನು ಅಲಿಂಕೋ ಮೂಲಕ ಸಂಪೂರ್ಣ ಉಚಿತವಾಗಿ ವಿತರಿಸಲಾಗುವುದು ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ , ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


    ಜಿಲ್ಲೆಯಲ್ಲಿರುವ ವಿಕಲಚೇತನರು ಮತ್ತು ಹಿರಿಯ ನಾಗರೀಕರ ಕುರಿತಂತೆ ನಿಖರ ಅಂಕಿಅಂಶಗಳು ಇಲ್ಲವಾದ್ದರಿಂದ ಪ್ರತೀ ಬಾರಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಸಾಧನ ಸಲಕರಣಗಳನ್ನು ವಿತರಿಸಲಾಗುತ್ತಿದ್ದು, ಜಿಲ್ಲೆಯಲ್ಲಿನ ವಿಕಲಚೇತನರು ಮತ್ತು ಹಿರಿಯ ನಾಗರೀಕರ ಕುರಿತಂತೆ ವ್ಯವಸ್ಥಿತ ರೀತಿಯಲ್ಲಿ ಸಮಗ್ರ ಸಮೀಕ್ಷೆ ನಡೆಸಿ, ನಿಖರ ಸಂಖ್ಯೆ ಮತ್ತು ಅವರಿಗೆ ಅಗತ್ಯವಿರುವ ಉಪಕರಣಗಳ ಬೇಡಿಕೆ ಸಲ್ಲಿಸಿದ್ದಲ್ಲಿ ಎಲ್ಲರಿಗೂ ಕೇಂದ್ರ ಸರ್ಕಾರದ ಮೂಲಕ ಅಗತ್ಯ ಸಾಧನ ಸಲಕರಣಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು, ಇದಕ್ಕಾಗಿ ಕೇಂದ್ರದಲ್ಲಿ ಅನುದಾನದ ಯಾವುದೇ ಕೊರತೆ ಇಲ್ಲ ಎಂದರು.

    ಗ್ರಾಮೀಣ ಪ್ರದೇಶದಲ್ಲಿ ಪಿಡಿಓ ಗಳು ಮತ್ತು ಪಂಚಾಯತ್ ಕಾರ್ಯದರ್ಶಿಗಳ ಮೂಲಕ ಮನೆ ಮನೆ ಸಮೀಕ್ಷೆ ನಡೆಸಿ, ವಿಕಲಚೇತನರು ಮತ್ತು ಹಿರಿಯ ನಾಗರೀಕರ ನಿಖರ ಅಂಕಿ ಅಂಶಗಳನ್ನು ಸಂಗ್ರಹಿಸಿ, ಅಗತ್ಯವಿರುವ ಸಾಧನ ಸಲಕರಣಗಳ ಬಗ್ಗೆ ಅಧಿಕಾರಿಗಳು ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಶೋಭಾ ಕರಂಧ್ಲಾಜೆ ತಿಳಿಸಿದರು. ಜಿಲ್ಲೆಯಲ್ಲಿ ಇ.ಎಸ್.ಐ ಆಸ್ಪತ್ರೆ ಆರಂಭಿಸುವ ಕುರಿತಂತೆ ವಾರಂಬಳ್ಳಿಯಲ್ಲಿ ಸ್ಥಳ ಗುರುತಿಸಲಾಗಿದ್ದು, ಶೀಘ್ರದಲ್ಲಿ ಶಂಕುಸ್ಥಾಪನೆ ಕಾರ್ಯ ನೆರವೇರಲಿದೆ ಎಂದರು. ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳ್ಕರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾಜಿಕ ನ್ಯಾಯದ ಅಡಿಯಲ್ಲಿ, ಪ್ರತಿಯೊಬ್ಬ ನಾಗರೀಕರಿಗೂ ಅನುಕೂಲವಾಗುವಂತೆ ಸಾಮಾಜಿಕ ಕಳಕಳಿಯಿಂದ ಪ್ರತಿವರ್ಷ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತವೆ. ಅಧಿಕಾರಿಗಳು ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿ, ವಿಕಲಚೇತನರು ಮತ್ತು ಹಿರಿಯ ನಾಗರೀಕರು ಸೇರಿದಂತೆ ಪ್ರತಿಯೊಬ್ಬರಿಗೂ ಈ ಯೋಜನೆಗಳನ್ನು ಅವರ ಮನೆಯ ಬಾಗಿಲಿಗೆ ತಲಪಿಸುವ ಕೆಲಸ ಮಾಡಬೇಕು ಎಂದರು. ರಾಜ್ಯದಲ್ಲಿರುವ ವಿಕಲಚೇತನರಲ್ಲಿ 6800 ಜನರಿಗೆ ವಿವಿಧ ದೈನಂದಿನ ಚಟುವಟಿಕೆಗಳನ್ನು ಕೈಗೊಳ್ಳಲು ವಾಹನಗಳ ಅವಶ್ಯಕತೆಯಿದ್ದು, ಈ ವರ್ಷ ಮೊದಲ ಹಂತದಲ್ಲಿ 3000 ಜನರಿಗೆ 30 ಕೋಟಿ ವೆಚ್ಚದಲ್ಲಿ ವಾಹನಗಳನ್ನು ವಿತರಿಸಲಾಗುವುದು.


    ಉಳಿದವರಿಗೆ ಮುಂದಿನ ವರ್ಷ ನೀಡಲಾಗುವುದು, ವಿಕಲಚೇತನರು ದೈಹಿಕವಾಗಿ ದುರ್ಬಲರಾಗಿರಬಹುದು ಆದರೆ ಮಾನಸಿಕವಾಗಿ ಅವರು ಇತರರಿಗಿಂತ ಸದೃಢವಾಗಿರುತ್ತಾರೆ , ಇವರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಸಾರ್ವಜನಿಕರ ಕುಂದು ಕೊರತೆ ಆಲಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಸಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಪ್ರತಿ ತಿಂಗಳ 25 ರಂದು ಜನತಾ ದರ್ಶನದ ಮೂಲಕ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕಾರ ಮಾಡಲಾಗುವುದು. ಸಾರ್ವಜನಿಕರು ತಮ್ಮ ಕುಂದಕೊರತೆಗಳನ್ನು ಜನತಾದರ್ಶನದ ಮೂಲಕ ಬಗೆಹರಿಸಿಕೊಳ್ಳುವಂತೆ ಸಚಿವರು ತಿಳಿಸಿದರು.

     

    ಕಾರ್ಯಕ್ರಮದಲ್ಲಿ ಜಿಲ್ಲೆಯ 495 ಫಲಾನುಭವಿಗಳಿಗೆ, 48.50 ಲಕ್ಷ ರೂ ಮೊತ್ತದ 2496 ವಿವಿಧ ಸಾಧನ ಪರಿಕರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿ.ಪಂ. ಸಿಇಒ ಪ್ರಸನ್ನ ಹೆಚ್,ಅಪರ ಜಿಲ್ಲಾಧಿಕಾರಿ ಮಮತಾ ದೇವಿ , ಕುಂದಾಪುರ ಉಪ ವಿಬಾಗಾಧಿಕಾರಿ ರಶ್ಮಿ, ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಗಿರಿರಾಜ್ ಪ್ರಸಾದ್ ಮೀನಾ , ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪ ನಿರ್ದೇಶಕಿ ಶ್ಯಾಮಲಾ, ಜಿಲ್ಲಾ ನಿರೂಪಣಾಧಿಕಾರಿ ಕೃಷ್ಣಪ್ಪ, ಜಿಲ್ಲಾ ವಿಕಲ ಚೇತನರ ಕಲ್ಯಾಣಾಧಿಕಾರಿ ರಾಮದಾಸ್ ಮತ್ತಿತರರು ಇದ್ದರು. ಅಲಿಂಕೋ ಸಂಸ್ಥೆಯ ಅಶೋಕ್ ಪಾಲ್ ಸ್ವಾಗತಿಸಿದರು, ಶಿಶು ಅಭಿವೃದ್ದಿ ಯೋಜನಾಧಿಕಾರಿ ವೀಣಾ ವಿವೇಕಾನಂದ ನಿರೂಪಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply