LATEST NEWS
ಹಿಜಬ್ ಹೋರಾಟಗಾರ್ತಿಯರು ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ – ಶೋಭಾ ಕರಂದ್ಲಾಜೆ

ಉಡುಪಿ ಎಪ್ರಿಲ್ 23: ಶಾಲಾ ಕಾಲೇಜುಗಳಲ್ಲಿ ಹಿಜಬ್ ಗೆ ಸಂಬಂಧಿಸಿದಂತೆ ಹೈಕೋರ್ಟ್ ಸ್ಪಷ್ಟ ಆದೇಶ ನೀಡಿದರೂ ಕೂಡ ವಿಧ್ಯಾರ್ಥಿನಿಯರು ಆದೇಶ ಉಲ್ಲಂಘಿಸಿ ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಹೊರಟಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಿಜಬ್ ಹೋರಾಟಗಾರ್ತಿಯರ ವಿರುದ್ದ ಕಿಡಿಕಾರಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ಹಿಜಾಬ್ ಗೆ ಸಂಬಂಧಿಸಿದಂತೆ ಹೈಕೋರ್ಟ್ ಸ್ಪಷ್ಟ ನಿರ್ಧಾರ ತಿಳಿಸಿದ್ದು, ಕಾಲೇಜಿಗೆ ಸಮವಸ್ತ್ರ ಧರಿಸಿ ಬರಬೇಕೆಂದು ಅಂತ ಹೇಳಿದೆ. ರಾಜ್ಯ ಸರಕಾರದ ಶಿಕ್ಷಣ ಇಲಾಖೆ ಕೂಡ ಇದನ್ನೇ ಹೇಳಿದೆ, ಆದರೆ ಹೈಕೋರ್ಟ್ ಆದೇಶ ಮೀರಿ ಕೆಲವರು ಹಿಜಾಬ್‌ಗೆ ಬೆಂಬಲ ಕೊಡುತ್ತಿದ್ದಾರೆ. ಈ ದೇಶದ ನೆಲದ ಕಾನೂನನ್ನು ಪಾಲನೆ ಮಾಡುವುದಿಲ್ಲ, ಮನಬಂದಂತೆ ನಡೆದುಕೊಳ್ಳುತ್ತೇವೆ ಅನ್ನೋದನ್ನ ಸಾಬೀತು ಮಾಡಿದ್ದಾರೆ. ಪೊಲೀಸ್ ವ್ಯವಸ್ಥೆ ಮೇಲೆ ದೌಜನ್ಯ ಮಾಡ್ತಾರೆ ಪೊಲೀಸ್ ಠಾಣೆ ಮೇಲೆ ದಾಳಿ ಮಾಡ್ತಾರೆ.

ಇದು ಅವರ ಮಾನಸಿಕತೆ, ದೇಶದಲ್ಲಿ ಎಲ್ಲರೂ ಒಟ್ಟಾಗಿ ಬದುಕಬೇಕು ಅನ್ನೋದು ನಮ್ಮ ಸಂಕಲ್ಪ, ನಮ್ಮ ಹೆಣ್ಣು ಮಕ್ಕಳಿಗೆ ಬೇಕಾದದ್ದು ಶಿಕ್ಷಣ, ಶಿಕ್ಷಣ ಪಡೆದು ಅವರ ಕಾಲ ಮೇಲೆ ಅವರು ನಿಲ್ಲಬೇಕು. ಹಾಲ್ ಟಿಕೆಟ್ ಪಡೆದು ಪರೀಕ್ಷೆ ಬರೆಯದೇ ಪ್ರಚಾರ ಗಿಟ್ಟಿಸುತ್ತಿದ್ದಾರೆ.
ಭಯೋತ್ಪಾದಕರು ಬೆಂಬಲ ಕೊಡುವ ರೀತಿಯಲ್ಲಿ, ಭಾರತದಲ್ಲಿ ಏನೋ ನಡೆಯುತ್ತೆ ಎನ್ನುವಂತೆ ಬಿಂಬಿಸಲು ಹೊರಟಿದ್ದಾರೆ. ಇದು ಸರಿಯಲ್ಲ, ಎಲ್ಲರೂ ಪರೀಕ್ಷೆ ಬರೆಯಬೇಕು ಪದವಿ ಪಡೆದು ಅವರ ಕಾಲ ಮೇಲೆ ಅವರು ನಿಲ್ಲಬೇಕು. ಈಗಲಾದರೂ ಸರಿ ಮಾಡಿಕೊಂಡು ಹೋಗಬೇಕು. ನಿಮ್ಮ ಹಿಂದೆ ನಿಂತ ಸಂಘಟನೆ, ಬದುಕಿನಲ್ಲಿ ಬರೋದಿಲ್ಲ, ಇದು ಭಾರತದಲ್ಲಿ ನಡೆಯೋದಿಲ್ಲ ಇಲ್ಲಿ ಪ್ರಜಾತಂತ್ರ ವ್ಯವಸ್ಥೆ ಇದೆ ಎಂದರು.