LATEST NEWS
ಸಾರಿಗೆ ವಾಹನಗಳಿಗೆ ಅಕ್ಟೋಬರ್ 3 ರಿಂದ ಶಿರಾಢಿ ಘಾಟ್ ಮುಕ್ತ
ಸಾರಿಗೆ ವಾಹನಗಳಿಗೆ ಅಕ್ಟೋಬರ್ 3 ರಿಂದ ಶಿರಾಢಿ ಘಾಟ್ ಮುಕ್ತ
ಮಂಗಳೂರು ಅಕ್ಟೋಬರ್ 1: ಈ ಭಾರಿ ಮಳೆಗಾಲದಲ್ಲಿ ಭೂ-ಕುಸಿತ ಉಂಟಾಗಿ ಸಂಪೂರ್ಣ ಬಂದ್ ಆಗಿದ್ದ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಹಸಿರು ನಿಶಾನೆ ದೊರೆತಿದ್ದು, ಅಕ್ಟೋಬರ್ 3 ರಿಂದ ಬಸ್ ಸಂಚಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಸಸಿಕಾಂತ್ ಸೆಂಥಿಲ್ ಅನುಮತಿ ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಯವರು, ಭಾರಿ ಮಳೆಯಿಂದ ರಸ್ತೆ ಮೇಲೆ ಗುಡ್ಡ ಕುಸಿತ ಉಂಟಾಗಿದ್ದ ಕಾರಣ ಶಿರಾಡಿ ಘಾಟ್‍ನ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿತ್ತು.
ಈಗ ತೆರವು ಕಾರ್ಯಾಚರಣೆ ಪೂರ್ಣಗೊಂಡು ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ ಎಂದು ಹೇಳಿದರು. ಈ ಮೊದಲು ಸೆಪ್ಟೆಂಬರ್ 5 ರಿಂದ ಲಘು ವಾಹನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಈಗ ಅಕ್ಟೋಬರ್ 3 ರಿಂದ ಸಾರಿಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಅಲ್ಲದೇ ಇನ್ನೆರಡು ವಾರಗಳ ಬಳಿಕ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಹೇಳಿದರು. ಅಲ್ಲದೆ ಶಿರಾಢಿ ಘಾಟ್ ರಸ್ತೆಯ ಕುಸಿತ ಸ್ಥಳಗಳಲ್ಲಿ 24 ಗಂಟೆ ಪೊಲೀಸ್ ನಿಯೋಜನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಶಿರಾಢಿ ಘಾಟ್ ಸಾರಿಗೆ ವಾಹನಗಳಿಗೆ ಮುಕ್ತವಾದ ಹಿನ್ನಲೆ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಬೆಂಗಳೂರು ಮಂಗಳೂರಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಶಿರಾಢಿ ಬಂದ್ ಆದ ನಂತರ ಮಂಗಳೂರು ಬೆಂಗಳೂರು ಪ್ರಯಾಣ ತೀರಾ ತ್ರಾಸದಾಯಕವಾಗಿತ್ತು.
ಚಾರ್ಮಾಡಿ ಮೂಲಕ ಬೆಂಗಳೂರನ್ನು ಸರಿಯಾದ ಸಮಯಕ್ಕೆ ತಲುಪುದು ಕಷ್ಟದಾಯಕವಾಗಿತ್ತು. ಈ ನಡುವೆ ರೈಲು ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಬೆಂಗಳೂರು ಮಂಗಳೂರು ನಡುವಿ ಪ್ರಮುಖ ಸಂಪರ್ಕವೇ ಬಂದ್ ಆದ ಸ್ಥಿತಿ ನಿರ್ಮಾಣವಾಗಿತ್ತು.