ಸಮುದ್ರದಲ್ಲಿ ಸಂಶೋಧನೆಯಲ್ಲಿ ತೊಡಗಿದ್ದ ಹಡಗಿಗೆ ಬೆಂಕಿ 16 ವಿಜ್ಞಾನಿಗಳ ಸಹಿತ 46 ಮಂದಿ ರಕ್ಷಣೆ

ಮಂಗಳೂರು ಮಾರ್ಚ್ 16: ಅರಬ್ಬೀ ಸಮುದ್ರದಲ್ಲಿ ಸಂಶೋಧನೆಯಲ್ಲಿ ತೊಡಗಿದ್ದ ಹಡಗಿಗೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದ್ದು, ಕೋಸ್ಟ್ ಗಾರ್ಡ್ ನ ಕ್ಷಿಪ್ರ ಕಾರ್ಯಾಚರಣೆಯಿಂದ ಹಡಗಿನಲ್ಲಿದ್ದ 46 ಮಂದಿಯನ್ನುರಕ್ಷಿಸಲಾಗಿದ್ದು, ಭಾರಿ ಅನಾಹುತವೊಂದು ತಪ್ಪಿದೆ.

ಪಣಂಬೂರು ಸಮುದ್ರ ಕಿನಾರೆಯಿಂದ 35 ನಾಟಿಕಲ್ ಮೈಲ್ ದೂರದಲ್ಲಿ ಈ ಘಟನೆ ನಡೆದಿದೆ. ಕಾರ್ಪೋರೇಷನ್ ಆಫ್ ಇಂಡಿಯಾ ಒಡೆತನಕ್ಕೆ ಸೇರಿದ ಸಾಗರ ಸಂಪದ ಎಂಬ ಹೆಸರಿನ ಹಡಗು ಇದಾಗಿದ್ದು ಇದು ಆಳ ಸಮುದ್ರದ ಬಗ್ಗೆ ಅಧ್ಯಯನ ನಡೆಸಲು ಈ ಹಡಗು ತೆರಳಿತ್ತು. ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡ ಬಗ್ಗೆ ಕೋಸ್ಟ್ ಗಾರ್ಡ್‌ಗೆ ಮಾಹಿತಿ ಬಂದಿತ್ತು.

ತಕ್ಷಣ ಕೋಸ್ಟ್ ಗಾರ್ಡ್ ತನ್ನ ಐಸಿಜಿಎಸ್ ಸುಜಯ್ ಮತ್ತು ವಿಕ್ರಮ್ ನೌಕೆಯನ್ನು ಕಾರ್ಯಾಚರಣೆಗೆ ಕಳುಹಿಸಿತು. ಮಧ್ಯರಾತ್ರಿ 12.20ಕ್ಕೆ ಸ್ಥಳಕ್ಕೆ ತಲುಪಿದ ಈ ಎರಡು ನೌಕೆ ಕಾರ್ಯಾಚರಣೆ ಶುರು ಮಾಡಿದ್ದವು.

ಕೋಸ್ಟ್ ಗಾರ್ಡ್ ಸಿಬ್ಬಂದಿ ಸಾಗರ ಸಂಪದ ನೌಕೆ ಒಳಗಡೆ ತೆರಳಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿದರು. ವಿಕ್ರಮ್ ನೌಕೆ ಸಿಬ್ಬಂದಿ ಹೊರಗಡೆಯಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಮುಂಜಾನೆ 1.30ರ ವೇಳೆಗೆ ಬೆಂಕಿಯನ್ನು ಸಂಪೂರ್ಣ ನಂದಿಸಲಾಯಿತು.

ಈ ಹಡಗಿನಲ್ಲಿ ಸಮುದ್ರದಲ್ಲಿ ಸಂಶೋಧನೆಗೆ ಆಗಮಿಸಿದ್ದ 16 ವಿಜ್ಞಾನಿಗಳು ಸೇರಿದಂತೆ 30 ಮಂದಿ ಹಡಗಿನ ಸಿಬ್ಬಂದಿಗಳಿದ್ದರು.
ಬೆಂಕಿ ತಗುಲಿದ ಸಾಗರ ಸಂಪದ ಹಡಗಿನಲ್ಲಿದ್ದ 16 ಮಂದಿ ವಿಜ್ಞಾನಿಗಳು ಸೇರಿದಂತೆ 30 ಮಂದಿ ಹಡಗಿನ ಸಿಬ್ಬಂದಿಗಳನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿ ನವ ಮಂಗಳೂರು ಬಂದರಿಗೆ ಕರೆ ತಂದಿದ್ದಾರೆ.

ನೌಕೆಯ 8 ಕಂಪಾರ್ಟ್‌ಮೆಂಟ್ ಬೆಂಕಿಯಿಂದ ಹಾನಿಗೊಳಗಾಗಿದೆ. ಶನಿವಾರ ಮಧ್ಯಾಹ್ನ 1.30ರ ಸುಮಾರಿಗೆ ಹಾನಿಗೀಡಾದ ನೌಕೆ ನವಮಂಗಳೂರು ಬಂದರಿಗೆ ಆಗಮಿಸಲಿದೆ. ಆ ಬಳಿಕ ಬೆಂಕಿ ಹೊತ್ತಿಕ್ಕೊಳ್ಳಲು ಕಾರಣ ಏನು ಎಂಬ ಬಗ್ಗೆ ಆಂತರಿಕ ತನಿಖೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ನೌಕೆಯಲ್ಲಿ 16 ವಿಜ್ಞಾನಿಗಳು ಸಹಿತ 46 ಮಂದಿ ಸಿಬ್ಬಂದಿಗಳಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

Facebook Comments

comments