DAKSHINA KANNADA
ಇಂಥ ಆರೋಪಿಗಳು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಲ್ಲಿ, ಮನೆಗೆ ನುಗ್ಗಿ ಕೊಲ್ಲುವ ಕೆಲಸ ಮಾಡಲೂ ಹೇಸಲ್ಲ – ಪ್ರವೀಣ್ ನೆಟ್ಟಾರು ತಾಯಿ
ಪುತ್ತೂರು ಪೆಬ್ರವರಿ 15: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿ ಎಸ್ ಡಿ.ಪಿ.ಐ ಪಕ್ಷ ಚುನಾವಣೆಯಲ್ಲಿ ಟಿಕೆಟ್ ನೀಡಿರುವುದು ಇದೀಗ ಕರಾವಳಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರವೀಣ್ ನೆಟ್ಟಾರು ಕುಟುಂಬ ಎಸ್ ಡಿಪಿ ಐ ಪಕ್ಷದ ಈ ನಡೆಗೆ ವಿರೋಧ ವ್ಯಕ್ತಪಡಿಸಿದೆ.
ಜುಲೈ 26ರಂದು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಎಂಬಲ್ಲಿ ಕೋಳಿ ಅಂಗಡಿಯನ್ನು ನಡೆಸುತ್ತಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಮೂರು ಜನ ಆರೋಪಿಗಳು ಮಾರಕಾಯುಧಗಳಿಂದ ಕಡಿದು ಕೊಲೆಗೈದಿದ್ದರು. ಬೆಳ್ಳಾರೆ ಪೋಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯ ನಡುವೆಯೇ ರಾಜ್ಯ ಸರಕಾರ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿತ್ತು. ತನಿಖೆಯ ಮುಂದುವರಿದ ಭಾಗವಾಗಿ ಎನ್.ಐ.ಎ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೋಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಹದಿಮೂರಕ್ಕೂ ಮಿಕ್ಕಿದ ಆರೋಪಿಗಳನ್ನು ಬಂಧಿಸಿದ್ದರು. ಈ ಆರೋಪಿಗಳ ಪೈಕಿ ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಫಿ ಬೆಳ್ಳಾರೆಯೂ ಪ್ರಮುಖ. ಪ್ರಸ್ತುತ ಜೈಲಿನಲ್ಲಿರುವ ಶಾಫಿ, ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ರಾಜ್ಯಾಧ್ಯಕ್ಷ ಮಜೀದ್ ಖಾನ್ ಈ ಘೋಷಣೆಯನ್ನು ಮಾಡಿದ್ದಾರೆ. ಅವರ ಘೋಷಣೆ ಒಂದೆಡೆ ಆತಂಕ ಸೃಷ್ಟಿಸಿದ್ದರೆ, ಇನ್ನೊಂದೆಡೆ ಭಾರೀ ಚರ್ಚೆಗೂ ಕಾರಣವಾಗಿದೆ.
ಪ್ರವೀಣ್ ನೆಟ್ಟಾರು ಪೋಷಕರು ಎಸ್.ಡಿ.ಪಿ.ಐ ಪಕ್ಷದ ಈ ತೀರ್ಮಾನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಮಗನನ್ನು ಕೊಂದ ಆರೋಪಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂದಿದ್ದಾರೆ. ಚುನಾವಣೆಯಲ್ಲಿ ಗೆದ್ದು, ಅಧಿಕಾರ ಪಡೆದುಕೊಂಡಲ್ಲಿ ಎಲ್ಲರನ್ನೂ ಕೊಂದು ಹಾಕಲು ಹಿಂದೇಟು ಹಾಕಲ್ಲ. ಇಂಥ ಆರೋಪಿಗಳು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಲ್ಲಿ, ಮನೆಗೆ ನುಗ್ಗಿ ಕೊಲ್ಲುವ ಕೆಲಸ ಮಾಡಲೂ ಹೇಸಲ್ಲ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಪ್ರವೀಣ್ ನೆಟ್ಟಾರು ಕೊಲೆಯ ಬಳಿಕ ಕೇಂದ್ರ ಸರಕಾರ ಪಿಎಫ್ಐ ಸಂಘಟನೆಯನ್ನೂ ನಿಶೇಧ ಮಾಡಿದೆ. ಪ್ರವೀಣ್ ಪ್ರಕರಣ ತಣ್ಣಗಾಗುವ ಹಂತದಲ್ಲಿರುವಾಗ ಎಸ್.ಡಿ.ಪಿ.ಐ ಪಕ್ಷ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಮೂಲಕ ವಿವಾದಕ್ಕೆ ಕಾರಣವಾಗಿದೆ.