Connect with us

LATEST NEWS

ರಾಷ್ಟ್ರೀಯ ತರಬೇತುದಾರರಿಂದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ – ವಿನೇಶ್‌ ಫೋಗಟ್‌ ಗಂಭೀರ ಆರೋಪ

ನವದೆಹಲಿ, ಜನವರಿ 19: ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ಎರಡರಲ್ಲೂ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್, ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ ಸಿಂಗ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಭಾರತದ ಇತರ ಅಗ್ರ ಕುಸ್ತಿಪಟುಗಳೊಂದಿಗೆ ಬುಧವಾರ ನವದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಫೋಗಟ್‌, “ರಾಷ್ಟ್ರೀಯ ತರಬೇತುದಾರರು ವರ್ಷಗಳಿಂದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. WFI ಅಧಿಕಾರಿಗಳು ಅಥ್ಲೀಟ್‌ಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ” ಎಂದು ಆರೋಪಿಸಿದ್ದಾರೆ. ಅಲ್ಲದೇ, ಡಬ್ಲ್ಯುಎಫ್‌ಐ ಅಧ್ಯಕ್ಷರನ್ನು ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

“ಡಬ್ಲ್ಯುಎಫ್‌ಐ ಅಧ್ಯಕ್ಷರನ್ನು ತೆಗೆದುಹಾಕುವವರೆಗೆ ನಾವು ಯಾವುದೇ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಸ್ಪರ್ಧಿಸುವುದಿಲ್ಲ” ಎಂದು ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಪ್ರತಿಭಟನೆಯಲ್ಲಿ ಘೋಷಿಸಿದ್ದಾರೆ. “ನಾವು ಈ ಬಗ್ಗೆ ಮಾತನಾಡಿದರೆ ನಮ್ಮ ವೃತ್ತಿಜೀವನವು ಕೊನೆಗೊಳ್ಳುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಫೆಡರೇಶನ್ ಸದಸ್ಯರು, ಮಹಿಳಾ ಕುಸ್ತಿಪಟುಗಳ ವಿರುದ್ಧ ಅಶ್ಲೀಲ ಪದಗಳನ್ನು ಬಳಸಿದ್ದಾರೆ. ನಾವು ಪ್ರಧಾನಿಯವರನ್ನೂ ಸಂಪರ್ಕಿಸಿದ್ದೇವೆ” ಎಂದು ವಿನೇಶ್ ನೋವು ತೋಡಿಕೊಂಡಿದ್ದಾರೆ.

ಲಕ್ನೋದ ರಾಷ್ಟ್ರೀಯ ಶಿಬಿರದಲ್ಲಿ ಹಲವಾರು ತರಬೇತುದಾರರು ಮಹಿಳಾ ಕುಸ್ತಿಪಟುಗಳನ್ನು ಶೋಷಿಸಿದ್ದಾರೆ. ಡಬ್ಲ್ಯುಎಫ್‌ಐ ಅಧ್ಯಕ್ಷರ ಆಜ್ಞೆಯ ಮೇರೆಗೆ ಕುಸ್ತಿಪಟುಗಳನ್ನು ಸಂಪರ್ಕಿಸುವ ಶಿಬಿರದಲ್ಲಿ ಕೆಲವು ಮಹಿಳೆಯರೂ ಇದ್ದಾರೆ. ಕೆಲವು ತರಬೇತುದಾರರು ರಾಷ್ಟ್ರೀಯ ಫೆಡರೇಶನ್‌ಗಳಿಗೆ ಹತ್ತಿರವಾಗಿದ್ದಾರೆ. ಆ ತರಬೇತುದಾರರು ಯುವತಿಯರನ್ನು ಶೋಷಿಸಿದ್ದಾರೆ ಎಂದು ದೂರಿದ್ದಾರೆ.

ನನಗೆ ಕನಿಷ್ಠ 10-12 ಮಹಿಳಾ ಕುಸ್ತಿಪಟುಗಳು ಗೊತ್ತು. WFI ಅಧ್ಯಕ್ಷರಿಂದ ಅನುಭವಿಸಿರುವ ಲೈಂಗಿಕ ಶೋಷಣೆಯ ಬಗ್ಗೆ ಈ ಕುಸ್ತಿಪಟುಗಳು ನನ್ನ ಬಳಿ ಹೇಳಿಕೊಂಡಿದ್ದಾರೆ. ಅವರು ನನಗೆ ತಮ್ಮ ಕರುಣಾಜನಕ ಕಥೆಗಳನ್ನು ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ, “ನಮ್ಮ ಹೋರಾಟವು ಸರ್ಕಾರ ಅಥವಾ ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ವಿರುದ್ಧ ಅಲ್ಲ. ಇದು ಡಬ್ಲ್ಯುಎಫ್‌ಐ ವಿರುದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಈ ಆರೋಪಗಳನ್ನು ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ತಳ್ಳಿಹಾಕಿದ್ದಾರೆ. “ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆಂದು ತಿಳಿದ ತಕ್ಷಣ ನಾನು ಇಲ್ಲಿಗೆ ಬಂದಿದ್ದೇನೆ. ಫೆಡರೇಶನ್ ನಮಗೆ ಕಿರುಕುಳ ನೀಡಿದೆ ಎಂದು ಹೇಳುವ ಯಾರಾದರೂ ದಾಖಲೆ ಕೊಟ್ಟಿದ್ದಾರೆಯೇ? ಆರೋಪ ಮಾಡುತ್ತಿರುವ ಕುಸ್ತಿಪಟುಗಳು ಫೆಡರೇಶನ್‌ನಿಂದ ಅಂತಹ ಸಮಸ್ಯೆಗಳನ್ನು ಹೊಂದಿದ್ದರೆ, 10 ವರ್ಷಗಳಿಂದ ಏಕೆ ಆ ಬಗ್ಗೆ ಮಾತನಾಡಲಿಲ್ಲ? ನಿಯಮಗಳು ರಚನೆಯಾದಾಗಲೆಲ್ಲಾ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಟೀಕಿಸಿದ್ದಾರೆ.

ಬ್ರಿಜ್ಬೂಷಣ್‌ ಶರಣ್ ಸಿಂಗ್ 2011 ರಿಂದ WFIನ ಚುಕ್ಕಾಣಿ ಹಿಡಿದಿದ್ದಾರೆ. ಫೆಬ್ರವರಿ 2019 ರಲ್ಲಿ ಸತತ ಮೂರನೇ ಬಾರಿಗೆ WFI ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ರಿಯೊ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್, ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ಸರಿತಾ ಮೋರ್, ಸಂಗೀತಾ ಫೋಗಟ್, ಸತ್ಯವರ್ತ್ ಮಲಿಕ್, ಜಿತೇಂದರ್ ಕಿನ್ಹಾ ಮತ್ತು ಸಿಡಬ್ಲ್ಯೂಜಿ ಪದಕ ವಿಜೇತ ಸುಮಿತ್ ಮಲಿಕ್ ಸೇರಿದಂತೆ 30 ಕುಸ್ತಿಪಟುಗಳು ಬುಧವಾರ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *